ಭಾರತೀಯ ನೌಕಾದಳ

	ಭಾರತ ಪರ್ಯಾಯದ್ವೀಪವನ್ನು ಆವರಿಸಿಕೊಂಡಿರುವ ಸಮುದ್ರ ವಲಯಗಳನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸುವ, ನೌಕಾಯೋಧರಿಗೆ ವೃತ್ತಿತರಬೇತಿ ನೀಡುವ, ಮತ್ತು ರಾಷ್ಟ್ರದ ಉಳಿದೆರಡು ರಕ್ಷಣಾ ಪಡೆ ಜೊತೆ ಸಹಕರಿಸಿ ಹಾಗೂ ಸಹವರ್ತಿಸಿ ರಾಷ್ಟ್ರಕ್ಕೆ ಭದ್ರತೆ ಒದಗಿಸುವ ಭಾರತೀಯ ನೌಕಾಸೈನ್ಯ ರಕ್ಷಣಾಪಡೆ (ಇಂಡಿಯನ್ ನೇವಿ). ಸೈನ್ಯ ಮತ್ತು ವಾಯುಬಲ ಉಳಿದೆರಡು ರಕ್ಷಣಾಪಡೆಗಳು. ಇವುಗಳ ಕಾರ್ಯಕ್ಷೇತ್ರಗಳು ಪ್ರಧಾನವಾಗಿ ಜಲ (ನೌಕಾಬಲ), ನೆಲ (ಸೈನ್ಯ) ಮತ್ತು ಬಾನು (ವಾಯುಬಲ). ಆಯಾ ಬಲಕ್ಕೆ ಒಬ್ಬೊಬ್ಬ ವರಿಷ್ಠ ದಂಡನಾಯಕನಿರುವನು. ಈತನ ಅಧೀನದಲ್ಲಿ ವಿವಿಧ ದರ್ಜೆಗಳ ಯೋಧರಿದ್ದು ಪ್ರತಿಯೊಂದು ಬಲವೂ ಒಂದೊಂದು ಸಂಪೂರ್ಣ ವ್ಯವಸ್ಥೆಯಾಗಿರುವುದು. ರಾಷ್ಟ್ರಾಧ್ಯಕ್ಷರು ಈ ಎಲ್ಲ ಬಲಗಳ ಪರಮೋಚ್ಚ ದಂಡನಾಯಕ.

	ನಮ್ಮ ದೇಶವನ್ನು ಸುತ್ತುವರಿದಿರುವ ಕಡಲ ತೀರದ ದೀರ್ಘತೆ 7516ಕಿ.ಮೀ ಇನ್ನು ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳಲ್ಲಿ 1197 ದ್ವೀಪಗಳೂ ಹರಡಿಹೋಗಿವೆ. ಭಾರತದ ಮುಖ್ಯ ವ್ಯಾಪಾರ (ಆಮದು ಮತ್ತು ರಫ್ತು) ಸಮುದ್ರದ ಮೂಲಕವೇ ಆಗಿರುವುದರಿಂದ ನಮ್ಮ ನೌಕಾಪಡೆ ವ್ಯಾಪಾರೀ ನೌಕೆಗಳಿಗೂ ನಾಗರಿಕ ಸಂಚಾರ ಮಾರ್ಗಗಳಿಗೂ ಯುಕ್ತ ರಕ್ಷಣೆ ಒದಗಿಸುವ ದಿಶೆಯಲ್ಲಿ ಕೂಡ ಕಾರ್ಯಪ್ರವೃತ್ತವಾಗಿರಬೇಕಾಗುತ್ತದೆ. ಈ ವಿಶಿಷ್ಟ ಹೊಣೆಯನ್ನು ತಟರಕ್ಷಕರ ಪಡೆ (ಕೋಸ್ಟ್ ಗಾರ್ಡ್) ನಿರ್ವಹಿಸುತ್ತದೆ. ಇದರ ಶಾಖೆಗಳು ಮುಂಬೈ, ಚೆನ್ನೈ ಮತ್ತು ಪೋರ್ಟ್ ಬ್ಲೇರ್‍ಗಳಲ್ಲಿವೆ. 

	ಐತಿಹಾಸಿಕ ಹಿನ್ನಲೆ: ಕ್ರಿ.ಪೂ. 2300ರ ಹೊತ್ತಿಗೆ ಹರಪ್ಪ ಉತ್ಖನನಗಳಲ್ಲಿ ಲೋಥಾಲ್ ಎಂಬಲ್ಲಿ ಅಲೆಗಳ ಹೊಡೆತ ತಡೆಯುವ ತಡೆಗೋಡೆ ನಿರ್ಮಸಿದ್ದುದಕ್ಕೆ ಸಾಕ್ಷ್ಯ ಸಿಕ್ಕಿದೆ. ಋಗ್ವೇದ, ಅಥರ್ವಣ ವೇದಗಳಲ್ಲಿ ನೌಕೆಗಳ ಬಳಕೆಯ ಬಗ್ಗೆ ಉಲ್ಲೇಖಗಳಿವೆ. ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯರ ಕಾಲದಲ್ಲಿ ನೌಕೆಗಳ ಬಳಕೆಯಿತ್ತು. ಭಾರತದ ಹೆಚ್ಚು ವ್ಯಾಪಾರವೆಲ್ಲ ಕಡಲ ಮಾರ್ಗವಾಗಿಯೇ. ಪ್ಲೈನಿ ಎಂಬ ರೋಮನ್ ಪ್ರವಾಸಿಗ ಭಾರತ-ರೋಮ್‍ಗಳ ನಡುವೆ ಹಡಗುಗಳಲ್ಲಿ ಚಿನ್ನ ಸಾಗಿಸಿ ವ್ಯಾಪಾರ ಮಾಡುತ್ತಿದ್ದರು ಎಂದು ಬರೆದಿದ್ದಾನೆ. ಅನೇಕ ನೌಕಾಮಾರ್ಗಗಳು ಶೋಧಿಸಲ್ಪಟ್ಟಿದ್ದುವು. ಹರಪ್ಪ ನಾಗರೀಕತೆಯ ಉತ್ಖನನಗಳಲ್ಲಿ ಪರ್ಷಿಯಾದ ಕಪ್ಪೆ ಚಿಪ್ಪು, ಹರಳುಗಳು ಇದ್ದವೆಂದು ವರದಿಯಾಗಿದೆ. 

	ಆರ್ಯಭಟ ಮತ್ತು ವರಾಹಮಿಹಿರ ನಕ್ಷತ್ರಗಳ ನೆರವಿನಿಂದ ಹಡಗುಗಳ ನೆಲೆಗಳನ್ನು ಗುರುತಿಸುತ್ತಿದ್ದರು. ಕ್ರಿ.ಶ 5ನೇ ಶತಮಾನದ ವೇಳೆಗೆ ಮತ್ಸ್ಯಯಂತ್ರವೆಂಬ ಉತ್ತರಮುಖಿಯನ್ನು ರಚಿಸಿದ್ದರು. ಕ್ರಿ.ಶ. 5-10 ನೆಯ ಶತಮಾನಗಳ ಅವಧಿಯಲ್ಲಿ ವಿಜಯನಗರ ಮತ್ತು ಕಳಿಂಗದ ರಾಜರುಗಳು ಮಲಯ, ಸುಮಾತ್ರಗಳನ್ನು ಗೆದ್ದು ತಮ್ಮ ಆಡಳಿತವನ್ನು ಸಾಗರದಾಚೆಗೂ ವಿಸ್ತರಿಸಿದ್ದರು. 984-1042ರ ಮಧ್ಯೆ ಚೋಳರು ಬರ್ಮಾ, ಮಲಯ, ಸುಮಾತ್ರಾಗಳಲ್ಲಿದ್ದ ಕಳ್ಳರನ್ನು ಬಗ್ಗು ಬಡಿದಿದ್ದರು. 1292ರಲ್ಲಿ ಮಾರ್ಕೊಪೋಲೋ ಭಾರತದಲ್ಲಿ ಹಡಗುಗಳ ನಿರ್ಮಾಣದ ಬಗ್ಗೆ ಬರೆದಿದ್ದಾನೆ. 14ನೆಯ ಶತಮಾನದ ವೇಳೆಗೆ 100 ಜನ ಒಟ್ಟಿಗೇ ಪ್ರಯಾಣ ಮಾಡಬಹುದಾಗಿದ್ದ ದೊಡ್ಡ ಹಡಗುಗಳ ನಿರ್ಮಾಣ, ನಿರ್ವಹಣೆಗಳನ್ನು ಕಂಡುಕೊಂಡಿದ್ದರು. 15ನೆಯ ಶತಮಾನದ ವೇಳೆಗೆ ಮಹಡಿ ಹಡಗುಗಳು ಬಳಕೆಗೆ ಬಂದುವು. ಇದರಲ್ಲಿ ಒಂದು ಭಾಗ ಜಖಂಗೊಂಡರೂ ಇನ್ನೊಂದು ಭಾಗ ಚೆನ್ನಾಗಿಯೇ ಇದ್ದು ಸಮುದ್ರ ಯಾನ ಮುಗಿಸುವಷ್ಟು ಅವಕಾಶಗಳಿದ್ದುವು. 

	13ನೆಯ ಶತಮಾನದಲ್ಲಿ ಪೋರ್ಚುಗೀಸರ ಆಗಮನದಿಂದ ನೌಕಾಯಾನಕ್ಕೆ ಅಪ್ಪಣೆ ಚೀಟಿಗಳನ್ನು ನಿರ್ಬಂಧಿಸುವ ಪರಿಪಾಠ ಬೆಳೆದದ್ದರಿಂದ ನೌಕಾ ಸಾಮಥ್ರ್ಯ ಕುಂಠಿತವಾಗತೊಡಗಿತು. 1529ರಲ್ಲಿ ಮುಂಬಯಿ ಬಂದರಿನಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಥಾಣಾ ಬಂಡೋರಾ ಮತ್ತು ಕಾರಂಜಾ ಕಂಪನಿಗಳು ಪೋರ್ಚುಗೀಸರಿಗೆ ಕಪ್ಪ ಕೊಡುವ ಏರ್ಪಾಟು ಆಗಿತ್ತು. 1531ರಲ್ಲಿ ಪೋರ್ಚುಗೀಸರು ನೌಕಾ ಆಡಳಿತವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರೂ 1662ರಲ್ಲಿ ಬ್ರಿಟಿಷರಿಗೆ ಬಿಟ್ಟು ಕೊಡಬೇಕಾಯಿತು. 1503ರ ಕೊಚ್ಚಿನ್ ಕದನದಲ್ಲಿ ಭಾರತೀಯರು ಸಂಪೂರ್ಣವಾಗಿ ಸೋತರು. 1509ರಿಂದ 400ವರ್ಷ ಕಾಲ ಪೋರ್ಚುಗೀಸರೇ ಸಂಪೂರ್ಣ ಒಡೆಯರಾಗಿದ್ದರು. 

	17ನೆಯ ಶತಮಾನಕ್ಕೆ ಶಿವಾಜಿ ತನ್ನ ಸ್ವಂತ ನೌಕಾ ನೆಲೆಯನ್ನು ಸ್ಥಾಪಿಸಿದ. ಇಡೀ ಕೊಂಕಣ ರಾಜ್ಯ ಅವನ ವಶವಾಯಿತು. 1729ರಲ್ಲಿ ಖನೋಜಿ ಆಂಗ್ರೆಯ ನಿಧನನಾಂತರ ಮರಾಠರು ತಮ್ಮ ಹಿಡಿತವನ್ನು ಕಳೆದುಕೊಂಡರು. 19ನೆಯ ಶತಮಾನದ ನಂತರ ಬ್ರಿಟಿಷ್ ರಾಯಲ್ ನೇವಿಗೆ ಭಾರತದ ಎಚ್.ಎಂ.ಎಸ್. ಹಿಂದೂಸ್ತಾನ್ (1795), ಕಾರನ್‍ವಾಲ್ಲಿಸ್ (1800), ಕ್ಯಾಮೆಲ್ (1806) ಸಿಲೋನ್ (1808) ಮತ್ತು ಏಷ್ಯಾ (1827) ಹಡಗುಗಳು ಸೇರ್ಪಡೆಯಾದುವು. 800ರಿಂದ 1000ಟನ್ ಸಾಮಥ್ರ್ಯದ ಹಡಗುಗಳನ್ನು ದಾಮನ್ ದ್ವೀಪದ ತೇಗದ ಮರಗಳನ್ನು ಬಳಸಿ ನಿರ್ಮಿಸಿದ್ದರು. 1827ರಲ್ಲಿ ನವಾರಿನೋ ಕದನ ಕಡಲಿನಲ್ಲೇ ನಡೆಯಿತು. ಹಲವಾರು ಮುಖ್ಯ ಸಂಧಾನಗಳಿಗೆ ಭಾರತದ ಹಡಗುಗಳಲ್ಲೇ ಸಹಿ ಮಾಡಲಾಗಿದೆ. ಎಚ್.ಎಂ.ಎಸ್ ಟ್ರಿಂಕಾಮಲೀ ಹಡಗು ಫೌಡ್ರೋಯಂಟ್ ಎಂದು ಮರು ನಾಮಕರಣಗೊಂಡು ಇಂದಿಗೂ (2005) ಸಮುದ್ರದಲ್ಲಿರುವ ಅತ್ಯಂತ ಹಳೆಯ ಹಡಗು ಎಂಬ ಖ್ಯಾತಿ ಪಡೆದಿದೆ. 1735ರಲ್ಲಿ ನಿರ್ಮಾಣಗೊಂಡ 'ಬಾಂಬೆ ಡಾಕ್‍ನಲ್ಲಿ ಇಂದಿಗೂ ವ್ಯವಹಾರ ನಡೆದಿದೆ. ಮುಂದೆ ರೇಡಾರ್ ನೆರವಿನಿಂದ ಹಡಗುಗಳನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಯಿತು.

ಭಾರತೀಯ ನೌಕಾಪಡೆ ಉಗಮ: ಈಸ್ಟ್ ಇಂಡಿಯಾ ಕಂಪನಿಯ ಕ್ಯಾ|| ಬೆಸ್ಟ್ ಎಂಬಾತ ಪೋರ್ಚುಗೀಸರನ್ನು ಸೋಲಿಸಿ ಭಾರತ ನೌಕಾಪಡೆಗೆ ಜನ್ಮ ನೀಡಿದ (1612). 1662ರಲ್ಲಿ ಮುಂಬಯಿ ಬಂದರು ಬ್ರಿಟಿಷರ ವಶವಾಯಿತು. ಆದರೂ 8-2-1665ರಂದು ಅದನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡು ವಿಧ್ಯುಕ್ತವಾಗಿ 27-9-1668ರಂದು ಕಂಪೆನಿಗೆ ವರ್ಗಾಯಿಸಲಾಯಿತು. ಬಾಂಬೆ ಮೆರೀನ್‍ಗೆ “ಹರ್ ಮೆಜೆಸ್ಟೀಸ್ ಇಂಡಿಯನ್ ನೇವಿ” ಎಂದು ಹೆಸರಿಡಲಾಯಿತು (1830). ಇದು 1840ರಲ್ಲಿ ಚೀನಾಯುದ್ಧದಲ್ಲಿ ಭಾರತ ಭಾಗವಹಿಸಿ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿತು. ಕಾಲಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಾದುವು. 1863ರಲ್ಲಿ ಹರ್ ಮೆಜೆಸ್ಟೀಸ್ ಇಂಡಿಯನ್ ಮೆರೀನ್‍ನ ಒಂದು ಭಾಗ ಕಲ್ಕತ್ತದಲ್ಲೂ ಇನ್ನೊಂದು ಭಾಗ ಮುಂಬಯಿಯಲ್ಲೂ ಕೆಲಸ ಮಾಡಿತು. 1892ಕ್ಕೆ ಇದನ್ನೇ ರಾಯಲ್ ಇಂಡಿಯನ್ ಮೆರೀನ್ ಎಂದು ಹೆಸರು ಬದಲಾಯಿಸಿತು. ಮೊದಲನೆಯ ಮಹಾಯುದ್ಧದ ವೇಳೆಗೆ (1914-18) ಮೈನ್ ಸ್ವೀಪರ್ಸ್, ಪೆಟ್ರೋಲ್ ಹಡಗುಗಳು, ಟ್ರೂಪ್ ಕ್ಯಾರಿಯರುಗಳ ಬಳಕೆ ಆಗಿತ್ತು. ಸಬ್ ಲೆಫ್ಟಿನೆಂಟ್ ಡಿ.ಎನ್.ಮುಖರ್ಜಿ ಮೊದಲ ಕಮೀಷನ್ಡ್ ಆಫೀಸರ್ ಆದರು. 1934ರಲ್ಲಿ ರಾಯಲ್ ಇಂಡಿಯನ್ ನೇವಿ ಆಗಿ 1950ರಲ್ಲಿ ಇಂಡಿಯನ್ ನೇವಿ ಭಾರತೀಯ ನೌಕಾಪಡೆ ಎಂಬ ಹೆಸರು ಪಡೆದಿದೆ. 
1616-86
ಇಂಡಿಯನ್ ಮೆರೀನ್

1686-1830
ಬಾಂಬೆ ಮೆರೀನ್

1830-58
ಇಂಡಿಯನ್ ನೇವಿ

1858-1863
ಹರ್‍ಮೆಜೆಸ್ಟೀಸ್ ಇಂಡಿಯನ್ ನೇವಿ

1863-77
ಬಾಂಬೆ ಆಂಡ್ ಬೆಂಗಾಲ್ ಮೆರೀನ್

1877-92
ಹರ್‍ಮೆಜೆಸ್ಟೀಸ್ ಇಂಡಿಯನ್ ಮೆರೀನ್

1877-1932
ರಾಯಲ್ ಇಂಡಿಯನ್ ಮೆರೀನ್

1934-50
ರಾಯಲ್ ಇಂಡಿಯನ್ ನೇವಿ

1950-ಇದುವರೆಗೆ
ಇಂಡಿಯನ್ ನೇವಿ ಭಾರತೀಯ ನೌಕಾ ಪಡೆ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ (1947) ರಾಯಲ್ ಇಂಡಿಯನ್ ನೇವಿಯಲ್ಲಿ 32 ಹಳೆಯ ಹಡಗುಗಳು ಕಾವಲು ಪಡೆಗೆ ಮಾತ್ರ ಯೋಗ್ಯವಾಗಿದ್ದವು. 11,000 ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿದ್ದರು. ಹಿರಿಯ ಅಧಿಕಾರಿಗಳನ್ನು ರಾಯಲ್ ಇಂಡಿಯನ್ ನೇವಿಯಿಂದ ಕರೆಸಿಕೊಳ್ಳಲಾಯಿತು. ರಿಯರ್ ಆಡ್ಮಿರಲ್ ಜಾನ್‍ಟಾಲ್ಬೋಟ್ ಸಾವಿಗ್‍ನಾಕ್ ಹಾಲ್ ಸ್ವತಂತ್ರಾನಂತರದ ಭಾರತದ ಮೊದಲ ಕಮಾಂಡರ್ ಇನ್‍ಚೀಫ್ ಆದರು. 26-1-1950ರಂದು ಗಣರಾಜ್ಯವೆಂದು ಘೋಷಿಸಿದ ಮೇಲೆ 'ರಾಯಲ್ ಪದವನ್ನು ಬಿಟ್ಟು 'ಇಂಡಿಯನ್ ನೇವಿ ಎಂದು ಖಾಯಂಗೊಳಿಸಲಾಯಿತು. ಇದರ ಮೊದಲ ಮಹಾದಂಡನಾಯಕ ಆಡ್ಮಿರಲ್ ಸರ್ ಎಡ್ವರ್ಡ್ ಪ್ಯಾರಿ. 1951ರಲ್ಲಿ ಅ|| ಸರ್ ಮಾರ್ಕ್ ಪಿಜೇ 1955ರಲ್ಲಿ ಅವರೇ ಚೀಫ್ ಆಫ್ ನೇವಲ್ ಸ್ಟಾಫ್ ಆಗಿ ನೇಮಕಗೊಂಡರು. 22-4-1958 ವೈಸ್ ಅಡ್ಮಿರಲ್ ರಾಂದಾಸ್ ಕಟಾರಿ ಭಾರತ ನೌಕಾಪಡೆಯ ಛೀಫ್ ಆಫ್ ನೇವಲ್ ಸ್ಟಾಫ್ ಆಗಿ ನೇಮಕಗೊಂಡರು. 
ಭಾರತದ ಕಡಲುಗಳಲ್ಲಿ ಯುದ್ಧ ನೌಕೆಗಳು: 15ನೆಯ ಶತಮಾನದ ವೇಳೆಗೆ ಆಟ್ಟೊಮನ್ ತುರ್ಕರು ಪಶ್ಚಿಮ ಏಷ್ಯಾ ಮತ್ತು ಪೂರ್ವ ಯೂರೋಪುಗಳಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆದರು. ಅವರು ಯುರೋಪಿನ ವ್ಯಾಪಾರದ ಮೇಲೆ ಕಣ್ಣಿಟ್ಟರು. ಕಾನ್ಸ್‍ಟಾಂಟಿನೋಪಲ್ (ಇಸ್ತಾನ್‍ಬುಲ್) ತುರ್ಕಿಯರಿಗೆ ಸೇರಿದ್ದರಿಂದ ಪೂರ್ವ ಭೂಮಾರ್ಗ ಪಾಶ್ಚಾತ್ಯ ವ್ಯಾಪಾರಿಗಳಿಗೆ ಮುಚ್ಚಿ ಹೋಗಿತ್ತು. 1497ರಲ್ಲಿ ಪೋರ್ಚುಗೀಸ್ ವಾಸ್ಕೋಡಗಾಮ ಆಫ್ರಿಕಾಖಂಡ ಬಳಸಿ ದೀರ್ಘಕಾಲದವರೆಗೆ ಹೊಸ ಪೂರ್ವ ಖಂಡಗಳನ್ನೂ ಕಂಡು ಹಿಡಿಯುವುದು ಅವನ ಉದ್ದೇಶವಾಗಿತ್ತು. ಸನ್‍ಗೇಬ್ರಿಯಲ್ ಯುದ್ಧ ನೌಕೆಯಲ್ಲಿ ಇನ್ನೂ ಇಬ್ಬರ ಸಹಚರರೊಂದಿಗೆ ಅವನು ದೀರ್ಘಯಾನ ಹೊರಟು 10ತಿಂಗಳ ಬಳಿಕ ಕಲ್ಲಿಕೋಟೆ ತಲಪಿದ. ಭಾರತೀಯರು ನೌಕಾಮಾರ್ಗಗಳನ್ನು ಯುದ್ಧಗಳಿಗಾಗಿ ಬಳಸಿಕೊಂಡರು. ಸನ್‍ಗೇಬ್ರಿಯಲ್ 20ಫಿರಂಗಿಗಳನ್ನು ಹೊತ್ತು ಭಾರತೀಯ ನೆಲವನ್ನು ಸೇರಿದ ಮೊದಲ ನೌಕೆ. ವಾಸ್ಕೊಡಗಾಮನಿಗೆ ವ್ಯಾಪಾರಕ್ಕೆ ಅನುಮತಿ ಕೊಡಲಾಯಿತು. ಭಾರತೀಯರಿಗೆ ತಮ್ಮ ವ್ಯಾಪಾರವೂ ವೃದ್ಧಿಯಾಗುವುದಷ್ಟೇ ಸಾಕಾಗಿತ್ತು. 
ಭಾರತದ ಸಂಬಾರ ಪದಾರ್ಥಗಳನ್ನು ಬಲು ದುಬಾರಿ ಬೆಲೆಗೆ ಪಶ್ಚಿಮದೇಶಗಳಿಗೆ ಮಾರುವ ಅತಿ ದೊಡ್ಡ ತಪ್ಪನ್ನು ಅವರು ಮಾಡದೇ ಹೋಗಿದ್ದಿದ್ದರೆ ಪೋರ್ಚುಗೀಸರೇ ಬಹುಕಾಲ ಭಾರತವನ್ನು ಆಳಬಹುದಾಗಿತ್ತು. ಎರಡನೆಯ ತಪ್ಪು ಅವರು ಭಾರತದೊಂದಿಗೆ ಸೌಹಾರ್ದ ಉಳಿಸಿಕೊಳ್ಳಲಿಲ್ಲ. ಇದರಿಂದ ಯೂರೊಪಿಯನ್ನರು ಭಾರತದ ಬಗ್ಗೆ ಆಸಕ್ತಿ ತಳೆದರು. ಕಾಲಕ್ರಮದಲ್ಲಿ ಅವರವರಲ್ಲೇ ಹಗೆತನ ಬೆಳೆಯಿತು. ಬ್ರಿಟಿಷರು ಚತುರರೂ ಬಲಶಾಲಿಗಳೂ ನಿಪುಣರೂ ಆಗಿದ್ದರು. ವಾಸ್ಕೋ ನಿಗದಿತವಾದ ತೆರಿಗೆಯನ್ನು ಕೊಡಲು ನಿರಾಕರಿಸಿದ್ದರಿಂದ ಪೋರ್ಚುಗಲ್ ಮತ್ತು ಕಲ್ಲಿಕೋಟೆಯ ಸಂಬಂಧಗಳು ಹದಗೆಟ್ಟವು. ಚರಿತ್ರೆಯಲ್ಲೇ ಎಂದೂ ಕಾಣದಂಥ ಹೀನ ಕ್ರೂರ ಕೃತ್ಯಗಳನ್ನು ಆತ ಮಾಡಿದ. ಕಲ್ಲಿಕೋಟೆಯಲ್ಲಿ ಅರಬರ ವ್ಯಾಪಾರದಲ್ಲಿ ತಲೆ ಹಾಕಿದ್ದರಿಂದ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಭಾರತ ಅರಬರ ಸಂಬಂಧ ಮೊದಲಿನಿಂದಲೂ ಚೆನ್ನಾಗಿಯೇ ಇತ್ತು. ಪೋರ್ಚುಗೀಸರು ಬೇರೆ ಬೇರೆ ಜಾಗಗಳನ್ನು ಹುಡುಕುತ್ತ ಕಣ್ಣಾನೂರು ಮತ್ತು ಕೊಚ್ಚಿನ್‍ಗಳನ್ನು ಮುತ್ತಿದರು. ಭಾರತದ ಕಡಲುಗಳ ಮತ್ತು ನೌಕಾ ಮಾರ್ಗಗಳ ಮೇಲೆ ಪ್ರಭುತ್ವ ಸಾಧಿಸುವುದು ಅವರ ಗುರಿಯಾಗಿತ್ತು. ಅವರ ಹೆಚ್ಚು ಹೆಚ್ಚು ಹಡಗುಗಳು ಮಲಬಾರ್ ತೀರಕ್ಕೆ ಬಂದುವು. ಭಾರತದ ಅಥವಾ ಅರಬರ ಯಾವುದೇ ಹಡಗೂ ಅವರ ಅಪ್ಪಣೆ ಇಲ್ಲದೆ ಚಲಿಸಿದಂತೆ ಕಟ್ಟು ನಿಟ್ಟು ಮಾಡಿದರು.
ಭಾರತದ ರಾಜಕೀಯ ಪರಿಸ್ಥಿತಿ ಕ್ಷೀಣವಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಹಿಂದೂ ಮುಸ್ಲಿಂ ಭೇದ ಹೆಚ್ಚಾಗಿತ್ತು. ಒಂದೇ ಧರ್ಮಕ್ಕೆ ಸೇರಿದ ರಾಜ್ಯಗಳಲ್ಲೇ ಅಂತಃಕಲಹಗಳು ಜಾಸ್ತಿಯಾಗಿ ಹಗೆತನ ಮೀರಿತ್ತು. ಈ ಸಂದರ್ಭದಲ್ಲಿ ಅರಬರದು ಮೇಲುಗೈಯಾಗಿತ್ತು. ಶಸ್ತ್ರಸಜ್ಜಿತರಾಗಿಯೇ ಬಂದ ಪಾಶ್ಚಾತ್ಯ ವ್ಯಾಪಾರಿಗಳು ಪರಿಸ್ಥಿತಿಯ ಲಾಭ ಪಡೆದು ಬಲಹೀನ ರಾಜರುಗಳನ್ನು ಒಪ್ಪಿಸಿ ಅವರ ರಾಜ್ಯಗಳಲ್ಲೇ ತಮ್ಮ ನೆಲೆಯನ್ನು ಭದ್ರವಾಗಿ ಊರಿದರು. ಪಶ್ಚಿಮ ತೀರದಲ್ಲಿ ಒಪ್ಪಿಗೆ ಇಲ್ಲದೆ ಚಲಿಸುತ್ತಿದ್ದ ಪೋರ್ಚುಗೀಸರ ಹಡಗುಗಳು ಭಾರತ ಮತ್ತು ಅರಬರ ಹಡಗುಗಳ ಮೇಲೆ ದಾಳಿ ನಡೆಸಿದರು. ಈ ವೈರುಧ್ಯಗಳಿಂದ ಕಲ್ಲಿಕೋಟೆ ವ್ಯವಹಾರ ಸ್ಥಗಿತವಾಯಿತು. ಕೊಚ್ಚಿನ್‍ನಲ್ಲಿ ಪೋರ್ಚುಗೀಸರು ತಲೆ ಹಾಕಿದ್ದರಿಂದ ಅಲ್ಲಿಯ  ಮತ್ತು ಕಲ್ಲಿಕೋಟೆ ರಾಜರುಗಳ ಮಧ್ಯೆ ಇದ್ದ ಪಾರಂಪರಿಕ ದ್ವೇಷ ಇನ್ನೂ ಹೆಚ್ಚಾಯಿತು. ಈ ರಾಜ್ಯಗಳು ತಮ್ಮದೇ ಆದ ಸಣ್ಣ ಸಣ್ಣ ನೌಕಾ ತುಕಡಿಗಳನ್ನು ಕಟ್ಟಿಕೊಂಡರೂ ಪೋರ್ಚುಗೀಸರನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಲಿಸ್ಬನ್ ಸರ್ಕಾರ ಭಾರತದ ಕಡಲುಗಳ ಮೇಲೆ ಕೇಂದ್ರೀಕರಿಸುತ್ತ ಪಶ್ಚಿಮ ಭಾರತ ಸಿಲೋನ್ ಮತ್ತಿತರ ಕಡೆ ನೆಲೆ ಊರಿದರು. 
ಪೋರ್ಚುಗೀಸರನ್ನು ಅನುಸರಿಸಿದ ಡಚ್ಚರು ಪೂರ್ವ ಕರಾವಳಿಯತ್ತ ಧಾವಿಸಿದರು. ಸುಮಾತ್ರಾ, ಜಾವಾಗಳಲ್ಲಿ ನೆಲಸಿದ್ದರೂ ಭಾರತದಲ್ಲಿ ಅವರ ಮೊದಲ ನೆಲೆ ಮಚಲೀಪಟ್ಟಣ. ಅಲ್ಲಿಂದ ದಕ್ಷಿಣಕ್ಕೆ ಕೋರಮಂಡಲ ಕಡಲತೀರ. ಡಚ್ಚರ ಈ ಸ್ಪಷ್ಟ ಗಡಿ ಉಲ್ಲಂಘನೆಯನ್ನು ಪೋರ್ಚುಗೀಸರು ಸ್ವಾಗತಿಸಿದರು. ಪೋರ್ಚುಗೀಸರ ಪ್ರಭಾವಲಯವನ್ನು ಭೇದಿಸಿ ನುಗ್ಗಿದ ಡಚ್ಚರು ಪಾಟನಾದಲ್ಲಿ ಒಂದು ನೆಲೆ ಸ್ಥಾಪಿಸಿದರು. ಹೀಗಾಗಿ ಪೋರ್ಚುಗೀಸರಿಗೆ ಭಾರತದ ಮೇಲಿದ್ದ ವ್ಯಾಪಾರೀ ಸರ್ವಮಾನ್ಯ ಒಡೆದು ಛಿದ್ರವಾಯಿತು. ಅವರು ಭಾರತದ ಮೆಣಸು ಮತ್ತಿತರ ಪದಾರ್ಥಗಳ ಮೇಲೆ ಅತಿಹೆಚ್ಚು ಬೆಲೆ ಹೇರಿದರು.
1599ರಲ್ಲಿ ಇಂಗ್ಲೆಂಡಿನ ಈಸ್ಟ್ ಇಂಡಿಯಾ ಕಂಪನಿ ಪ್ರಾರಂಭವಾಯಿತು. ನಾಲ್ಕು ಹಡಗುಗಳು ಬಳಕೆಗೆ ಬಂದುವು. ಅವುಗಳಲ್ಲಿ ಎರಡನ್ನು ಸುಮಾತ್ರಾದ ಖಾಸಗಿ ಕಂಪನಿಯವರು ನಿರ್ವಹಿಸಿದರು. ಕಂಪನಿ 1609ರಲ್ಲೇ ಭಾರತದೊಡನೆ ವ್ಯಾಪಾರೀ ಪ್ರಯತ್ನ ನಡೆಸಿದರೂ ಪೋರ್ಚುಗೀಸರ ವಿರೋಧ ಬಲವಾಯಿತು. 1612ರಲ್ಲಿ ಕಂಪನಿ ಸಶಸ್ತ್ರ ವ್ಯಾಪಾರಿಗಳನ್ನು ಹೊತ್ತ ಒಂದು ತುಕಡಿಯನ್ನು ಸೂರತ್ ಬಂದರಿನಲ್ಲಿ ಇಳಿಸಿತು. ಬಂದರಿನ ಹೊರಗೆ ಎರಡೂ ಸೈನ್ಯಗಳ ನಡುವೆ ಕಾಳಗವಾಯಿತು. ಬ್ರಿಟಿಷ್ ಪಡೆ ಹೆಚ್ಚು ನಿಯಂತ್ರಣದಲ್ಲಿದ್ದು ಮದ್ದು ಗುಂಡುಗಳ ಸಾಮಥ್ರ್ಯವಿದ್ದುದರಿಂದ ಇದಕ್ಕೆ ಜಯ ಲಭಿಸಿತು. 
1915ರಲ್ಲಿ ಸಾಂಪ್ರದಾಯಿಕವಾಗಿ ಮಾಡಿಕೊಂಡ ಒಂದು ಒಪ್ಪಂದದ ಪ್ರಕಾರ ಮೊಗಲ್ ಸಾಮ್ರಾಜ್ಯ ಬ್ರಿಟಿಷ್‍ರಿಗೆ ಮುಂದುವರಿಯಲು ಅನುವು ಮಾಡಿಕೊಟ್ಟಿತು. ಬ್ರಿಟಿಷರು ತಮ್ಮ ಸಂಸ್ಥೆಗಳನ್ನು ಸೂರತ್, ಅಹಮದಾಬಾದ್ ಮತ್ತು ಕಾಂಬೇಗಳಲ್ಲಿ ಸ್ಥಾಪಿಸಿದರು. 
ಭಾರತೀಯರ ಪ್ರವೇಶ: ಈಸ್ಟ್ ಇಂಡಿಯಾ ಕಂಪನಿಯ ರಕ್ಷಣೆಗೋಸ್ಕರ 1613ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪಿಸಲಾದ “ಇಂಡಿಯನ್ ಮೇರಿನ್” ಭಾರತದಲ್ಲಿ ತನ್ನ ಮೊದಲ ಕೇಂದ್ರವನ್ನು ಸೂರತ್‍ನಲ್ಲಿ ಸ್ಥಾಪಿಸಿತು. ಅನೇಕ ಕದನಗಳಲ್ಲಿ ಡಚ್ಚರನ್ನೂ, ಪೋರ್ಚುಗೀಸರನ್ನೂ ಕೊನೆಗೆ ಫ್ರೆಂಚರನ್ನೂ ಜಯಿಸಿ ಅವರು ತಮ್ಮ ಕಡಲ ತೀರಗಳ ಒಡೆತನದ ಜೊತೆಗೆ ಒಳನಾಡಿನ ಒಡೆತನವನ್ನೂ ದಕ್ಕಿಸಿಕೊಂಡರು. ಪರ್ಷಿಯನ್ ಕೊಲ್ಲಿ, ಆಡೆನ್, ಮಾರಿಷಿಯಸ್, ಜಾವಾ ಮೊದಲಾದ ನೆಲೆಗಳನ್ನೂ ದಕ್ಕಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿ ಬಹಳ ಚತುರವಾಗಿ ಎಡಬಿಡದೆ ಶ್ರಮಿಸುತ್ತಿತ್ತು. ಇಂಡಿಯನ್ ಮೇರಿನ್‍ನಲ್ಲಿ ಅನೇಕ ಹಡಗುಗಳ ಸೇರ್ಪಡೆಯಾಯಿತು. 1661ರಲ್ಲಿ ಪೋರ್ಚುಗಲ್ ಬ್ರಿಟಿಷ್ ಸಾರ್ವಭೌಮತ್ವಕ್ಕೆ ಸೋತು ಬ್ರಿಟನ್ ರಾಜಕುಮಾರಿ ಇಂಫೆಂಟಾ ಕ್ಯಾಥರೀನಳ ಮತ್ತು ಎರಡನೆಯ ಕಿಂಗ್ ಚಾರ್ಲ್ಸ್ ಇವರ ಮದುವೆ ಸಂದರ್ಭದಲ್ಲಿ ಮುಂಬಯಿಯನ್ನು ಬಳುವಳಿಯಾಗಿ ನೀಡಿತು. ಏಳು ವರ್ಷಗಳ ಬಳಿಕ ಬ್ರಿಟನ್ ಸರ್ಕಾರ ಈಸ್ಟ್ ಇಂಡಿಯಾ ಕಂಪನಿಗೆ ವರ್ಷಕ್ಕೆ 10 ಪೌಂಡುಗಳ ಬಾಡಿಗೆಗೆ ಮುಂಬಯಿಯನ್ನು ಗುತ್ತಿಗೆಗೆ ಕೊಟ್ಟಿತು. ಅನಾಯಾಸವಾಗಿ ಕೈಗೆ ಸಿಕ್ಕ ನೈಸರ್ಗಿಕ ಬಂದರನ್ನು ಹಡಗು ನಿರ್ಮಾಣಕ್ಕೆ ಮೀಸಲಿಟ್ಟು ಅಭಿವೃದ್ಧಿ ಪಡಿಸಿ ಅದಕ್ಕೆ ಕಂಪನಿ ಬಾಂಬೆ ಡಾಕ್‍ಯಾರ್ಡ್ ಎಂದು ಹೆಸರಿಟ್ಟಿತು. ಮರಾಠರ ಜೊತೆ ವ್ಯಾಜ್ಯ ನಿರಂತರವಾಗಿ ಮುಂದು ವರೆಯುತ್ತಿದ್ದುದರಿಂದ ಕಂಪನಿ ತನ್ನ ನೆಲೆಯನ್ನು ಸೂರತ್‍ನಿಂದ ಮುಂಬಯಿಗೆ ವರ್ಗಾಯಿಸಿತು (1688). ಆದ್ದರಿಂದ ಇಂಡಿಯನ್ ಮೆರೀನ್ ಬಾಂಬೆ ಮೆರೀನ್ ಆಯಿತು. 1782ರ ಹೊತ್ತಿಗೆ ಬ್ರಿಟಿಷರ ಪ್ರಭುತ್ವ ಒಳನಾಡಿನ ಮೇಲೂ ಸಾಕಷ್ಟು ವ್ಯಾಪಿಸಿತ್ತು. ಅನೇಕ ಸುಧಾರಣೆಗಳನಂತರ 20ನೆಯ ಶತಮಾನದ ಮೊದಲಿಗೆ ಇದನ್ನು ರಾಯಲ್ ಇಂಡಿಯನ್ ಮೆರೀನ್ ಎಂದು ಕರೆದರು. ಅದರ ಮುಖ್ಯ ಉದ್ದೇಶ ಕಾವಲು ಕವಾಯಿತು ನಡೆಸುವುದರ ಜೊತೆಗೆ ಭಾರತೀಯ ಬಂದರುಗಳ, ತೀರಗಳ ಮತ್ತು ಸಮುದ್ರದ ಆಳಗಳ ಸರ್ವೇಕ್ಷಣೆ ನಡೆಸುವುದಾಗಿತ್ತು. ಅಲ್ಲಿಯ ಅಧಿಕಾರಿಗಳು ಎಲ್ಲರೂ ಬ್ರಿಟಿಷರೇ ಆಗಿದ್ದರು. ಸಿಬ್ಬಂದಿ ಮಾತ್ರ ಭಾರತದ ಕೊಂಕಣ ಪ್ರದೇಶದ ನಾವಿಕರಾಗಿದ್ದರು. 
ಮೊದಲನೆಯ ಮಹಾಯುದ್ಧದಲ್ಲಿ (1914-18) ದಿ ರಾಯಲ್ ಇಂಡಿಯನ್ ಮೆರೀನ್ ಸಕ್ರಿಯವಾಗಿ ಭಾಗವಹಿಸಿದ್ದರಿಂದ ಅದು ಸಾಕಷ್ಟು ಪ್ರಬಲವಾಗಿ ಬೆಳೆಯಿತು. ಯುದ್ಧ ಮುಗಿಯುತ್ತಿದ್ದಂತೆ ಅನೇಕ ಮಂದಿ ಕೆಲಸ ಕಳೆದುಕೊಂಡರು. ತತ್ಫಲವಾಗಿ ಅದು ಸಣ್ಣ ಸಂಸ್ಥೆಯ ಮಟ್ಟಕ್ಕೆ ಕುಸಿಯಿತು. ಕೆಲವು ಬಂದರುಗಳ ಉಸ್ತುವಾರಿ ಕೆಲಸ ಮಾತ್ರ ಸಾಧ್ಯವಾಯಿತು. ಭಾರತದ ನೌಕೆಯ ರಕ್ಷಣಾ ಕಾಯಕವನ್ನೂ ರಾಯಲ್ ನೇವಿಗೆ ವಹಿಸಿದ್ದು ಅದರಲ್ಲಿ ಅನುಭವೀ ಭಾರತೀಯರಿಗೆ ಅವಕಾಶಗಳಿರಲಿಲ್ಲ. ಕೆಲವು ನಾಗರಿಕರ ಒತ್ತಾಯದ ಮೇಲೆ ದಿ ರಾಯಲ್ ಇಂಡಿಯನ್ ನೇವಿ ಎಂಬ ಚಿಕ್ಕ ಸಂಸ್ಥೆಯನ್ನು ಸ್ಥಾಪಿಸಲು ಅರೆಮನಸ್ಸಿನಿಂದ ಒಪ್ಪಿದರು. ಇದರ ಕೇಂದ್ರ ಕಛೇರಿ ಮುಂಬಯಿಯಲ್ಲಿತ್ತು. ಕಾಲಕ್ರಮೇಣ ಅದರ ಅಧಿಕಾರ ಭಾರತೀಯರಿಗೆ ಸಿಕ್ಕಿತು. 1930ಕ್ಕೆ ರಾಯಲ್ ಇಂಡಿಯನ್ ನೇವಿಗೆ ಅಧಿಕಾರಿಗಳನ್ನು ನೇಮಿಸುವ ಕಾರ್ಯ ಪ್ರಾರಂಭವಾಯಿತು. 1939ರಲ್ಲಿ ಎರಡನೆಯ ಮಹಾಯುದ್ಧ (1939-45) ಪ್ರಾರಂಭವಾಗುತ್ತಿದ್ದಂತೆ ಈ ಕಾರ್ಯ ವಿಸ್ತಾರಗೊಂಡಿತು. ಕೆಲವು ವ್ಯಾಪಾರೀ ಹಡಗುಗಳನ್ನು ಯುದ್ಧ ನೌಕೆಗಳಾಗಿ ಪರಿವರ್ತಿಸಲಾಯಿತು. ಇನ್ನೂ ಹೆಚ್ಚು ಭಾರತೀಯರಿಗೆ ನೌಕಾದಳದಲ್ಲಿ ಪ್ರವೇಶ ದೊರೆಯಿತು. ಸಮುದ್ರದ ಮಧ್ಯಭಾಗದಲ್ಲಿ ನಡೆಯುವ ಯುದ್ಧಗಳಲ್ಲಿ ಅವರು ಒಳ್ಳೆಯ ಪ್ರದರ್ಶನಗಳನ್ನು ನೀಡಿದರು. ಕೆಲವರಿಗೆ ವೀರ ಸನ್ಮಾನಗಳನ್ನು ಕೊಡಲಾಯಿತು. 1950ರಲ್ಲಿ ಭಾರತ ಪ್ರಜಾಪ್ರಭುತ್ವವಾದಾಗ ರಾಯಲ್ ಹೆಸರನ್ನು ಕೈಬಿಟ್ಟು ಇಂಡಿಯನ್ ನೇವಿ ಹೆಸರು ಉಳಿಯಿತು. ಈಚೆಗೆ (2000) ಇದು ತನ್ನ ಸ್ವರ್ಣ ಮಹೋತ್ಸವವನ್ನೂ ಆಚರಿಸಿತು. 
ಐವತ್ತೈದು ವರ್ಷಗಳ ಹಿಂದೆ ಅದು ಸೌಮ್ಯವಾದ ಸ್ನೇಹ ತುಂಬಿದ ನೌಕಾ ನೆಲೆ. ಆಗ ಎರಡು ಸಾವಿರಕ್ಕೂ ಕಡಿಮೆ ಅಧಿಕಾರಿಗಳಿದ್ದರು. ನೌಕಾ ಚರಿತ್ರೆಯನ್ನು 20 ಪುಟಗಳಲ್ಲಿ ಬರೆದು ಮುಗಿಸಿಬಿಡಬಹುದಾಗಿತ್ತು. ಕೆಲವೇ ಕ್ಯಾಪ್ಟನ್ನುಗಳು ಕ್ಯಾಡೆಟ್‍ಗಳು ಇದ್ದು ಒಬ್ಬರಿಗೆ ಇನ್ನೊಬ್ಬರ ಹಿನ್ನಲೆ, ಹೆಂಡತಿ, ಮಕ್ಕಳು ಕುಟುಂಬ ಮತ್ತಿತರ ಪರಿಚಯವಿತ್ತು. ಎರಡೇ ಆಡ್ಮಿರಲ್‍ಗಳು ಒಬ್ಬರು ದೆಹಲಿಯಲ್ಲಿ ಮತ್ತೊಬ್ಬರು ನೌಕಾ ನೆಲೆಯಲ್ಲಿ; ಒಬ್ಬ ಕಮ್ಮೊಡೋರ್ ಉನ್ನತ ಅಧಿಕಾರಿಯಾಗಿ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದದು. 
ಮೂಲ ಇಂಡಿಯನ್ ನೇವಿ ಅಧಿಕಾರಿಗಳು ಮಹಾಯುದ್ಧದ ಕಾಲಕ್ಕೆ ಸೇರಿದ ಮೀಸಲು ಪಡೆಯವರಾಗಿದ್ದರು. ಯುದ್ಧ ಮುಗಿಯುವ ವೇಳೆಗೆ ಅವರು ಖಾಯಂಗೊಂಡಿದ್ದರು. ಕೆಲವೇ ಮಂದಿ ಕಪ್ಪು ಕ್ಯಾಡೆಟ್ ಎಂಟ್ರಿ ಆಫೀಸರುಗಳು. ಆದರೆ ನೌಕಾದಳದಲ್ಲಿ ಮೀಸಲಿನಿಂದ ಖಾಯಂ ಆದ ಅಧಿಕಾರಿಗಳಿದ್ದು ಹೆಚ್ಚಿನವರು ನಾಗರಿಕರೇ (ಸಿವಿಲಿಯನ್ಸ್) ಆಗಿದ್ದರು. ಆಡಳಿತಕ್ಕೆ ಬೇಕಾದ ಬಿಗಿ, ಬಿಸಿ, ಗತ್ತುಗಾರಿಕೆ ಇರಲಿಲ್ಲ. ಅವರಿಗಿದ್ದುದು ಡಾರ್ಟಮೌತ್ ತರಬೇತಿ ಮಾತ್ರ. ಸಬ್‍ಲೆಫ್ಟಿನೆಂಟ್‍ಗಳ ಔದ್ಯೋಗಿಕ ತರಬೇತಿಯೂ ಇರಲಿಲ್ಲ. ಅವರನ್ನು 3 ತಿಂಗಳಲ್ಲಿ ತಯಾರಾದ “90 ದಿನಗಳ ಅದ್ಭುತ” ಎಂದು ಕರೆಯುತ್ತಿದ್ದರು. ಆದರೆ ಅವರು ತಮ್ಮ ಈ ನ್ಯೂನತೆಗಳನ್ನು ಇತರ ಗುಣಗಳಿಂದ ತೂಗಿ ಸರಿಕಟ್ಟಿದರು. ಅವರಲ್ಲಿ ಬಹಳ ಮಂದಿ ಜನಗಳ ನಿಯಂತ್ರಕರಾದರು. ನೌಕೆಗಳನ್ನು ಚೆನ್ನಾಗಿ ನಿಭಾಯಿಸುವವರಾಗಿದ್ದರು. ನೌಕಾ ವ್ಯವಹಾರವೂ ಕೇವಲ ಹವ್ಯಾಸವಷ್ಟೇ ಆಗಿರದೆ ಅದೊಂದು ವಿಶಿಷ್ಟ ಕಲೆಯೂ ಆಗಿತ್ತು. ಆಡ್ಮಿರಲ್‍ಗಳು ಜೆಟ್ಟಿಯವರೆಗೂ ಹೋಗಿ ನಿಂತು ಹಡಗುಗಳು ತೀರದಗುಂಟ ಬರುವುದನ್ನು ವೀಕ್ಷಿಸುತ್ತಿದ್ದರು. ಯಾರಾದರೂ ತಪ್ಪು ಮಾಡಿದರೆ ಅವರು ಸ್ಥಳದಲ್ಲೇ ಸ್ಥೂಲವಾಗಿ ಕಚ್ಚಾ ಆದೇಶಗಳನ್ನು ಕೊಡುತ್ತ ಗೊಂದಲ ಆಗದಂತೆ ನೋಡಿಕೊಳ್ಳುತ್ತಿದ್ದರು. 
1952ರಲ್ಲಿ ಕಾರೋನೇಷನ್ ರೆವ್ಯೂಗಾಗಿ ಭಾರತೀಯ ನೌಕಾಪಡೆ ಬ್ರಿಟನ್ ತಲಪಿತು. ಐ.ಎನ್.ಎಸ್. ಡೆಲ್ಲಿಗೆ ಅದರ್ ಚಟರ್ಜಿ, ಐ.ಎನ್.ಎಸ್. ರಣಜಿತ್‍ಗೆ ಚಾರ್ಲ್ ನಂದಾ ಅಧಿಕಾರಿಗಳಾಗಿದ್ದರು. ರಾಯಲ್ ನೇವಿಯ ಅನೇಕ ಅಧಿಕಾರಿಗಳು ಆಶ್ಚರ್ಯಪಡುವಷ್ಟು ಮಟ್ಟಿಗೆ ಇವರು ತಮ್ಮ ಪಡೆಗಳನ್ನು ನಿರ್ವಹಿಸಿದರು. ಅದರ್ ಚಟರ್ಜಿಗೆ ಆಗ 39 ವರ್ಷ, 18 ವರ್ಷಗಳ ಅನುಭವ. ಆ ದಿನಗಳಲ್ಲಿ ಹಗ್ಗದಿಂದ ಎಳೆದೆಳೆದು ತಂದು ಹಡಗು ಲಂಗರಹಾಕುವುದು ಅವಮಾನಕರ ವಿಷಯವಾಗಿತ್ತು. ಒಂದೊಂದು ವೇಳೆ ಹಳೆಯ ಪುಷರ್‍ಗಳಾದ ನ್ಯಾನ್ಸಿ, ಎಲ್ಸಿ, ಮೇರಿ ಬೋಟುಗಳೇ. ಆಗ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಅಡ್ಡ ಹೆಸರಿಟ್ಟು ಕರೆಯುತ್ತಿದ್ದರು. (ಬೆನ್ನ ಹಿಂದೆ ಮಾತ್ರ) ಪೀಟರ್, ಚಾಕರ್ಸ್, ಚಾಂಡಿ, ರೋನಿ, ಬಂಟೆ, ರೊಸಿ, ಸ್ಟಾನ್, ಪಾಷಾ, ಇತ್ಯಾದಿ. ಏವಿಯೇಟರುಗಳಲ್ಲಿ ಕೆಲವರು ಟ್ಯಾಲಿ ಹೋ, ಆಂಡಿ, ಟೈಗರ್, ಚಾಪ್ಸ್ ಇತ್ಯಾದಿ. 
ಭಾರತೀಯ ನೌಕದಳ ಸರಳವಾಗಿತ್ತು. ಅವರ ದಿನಚರಿ ಖಾಲಿಯಾದವುಗಳನ್ನು ಭರ್ತಿಮಾಡುವುದು, ಮದ್ದು ಗುಂಡು ಹಾರಿಸುವುದು ಅಷ್ಟೇ. ಅಂದಿನ ಫಿರಂಗಿಗಳು ನಿಖರವಾಗಿರಲಿಲ್ಲ. ಅಭ್ಯಾಸದ ಫೈರಿಂಗುಗಳು 10,000 ಗಜಗಳ ಅಂತರದಲ್ಲಿ ಸಮಾನರೇಖೆಗಳಲ್ಲಿ ನಡೆಯುತ್ತಿತ್ತು. ಹಾಥಿ ಎಂಬ ಟನ್ ದೋಣಿ ಅಭ್ಯಾಸಿಗಳ ಗುರಿಯನ್ನು ಎಳೆದು ತರುತ್ತಿತ್ತು. ಅನೇಕ ವೇಳೆ ಷೆಲ್ಲುಗಳು ಅದನ್ನು ದಾಟಿ ಹೋಗುತ್ತಿದ್ದುವು. ಅತಿಮುಖ್ಯವಾದ ಅಭ್ಯಾಸ ರಾತ್ರಿ ಕಾಳಗ. ಹಡಗುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಿದ್ದರು. ಒಂದು ಗುಂಪು ಇನ್ನೊಂದು ಗುಂಪನ್ನು ಅಟ್ಟಿಸಿಕೊಂಡೋ ಹುಡುಕುತ್ತಲೋ ಹೋಗುವುದು. ಕೆಂಪು ಬಾವುಟಗಳನ್ನು ಸಿಕ್ಕಿಸಿದ ಬಾಣಗಳನ್ನು ವಿನಿಮಯ ಮಾಡಿಕೊಂಡು ಎಸೆದಾಡುತ್ತಿದ್ದರಿಂದ ಅಲ್ಲಿ ಹಬ್ಬದ ವಾತಾವರಣ ಏರ್ಪಾಡಾಗುತ್ತಿತ್ತು, ಅಣಕು ಗುಂಡು ಕಾಳಗದಂತೆ. ಅನಂತರ ಅವರಿಗೆ ಸಿಗ್ನಲ್‍ಗಳನ್ನು ಕೊಡಲಾಗುತ್ತಿತ್ತು. ಹಡಗುಗಳ ದೀಪಗಳನ್ನು ಆರಿಸಿಬಿಡುತ್ತಿದ್ದರು. ಮುಂದೆ ಕವಾಯಿತಿಗೆ ಕರೆಯುತ್ತಿದ್ದರು. 
ನೌಕೆಯವರು ನಡು ಕಡಲವರೆಗೂ ಹೋಗುತ್ತಿದ್ದರು. ಟ್ರೆಂಕಾಮಲಿಯಲ್ಲಿರುವಾಗ ಪ್ರತಿವರ್ಷ ನೌಕಾಪಡೆ ಜನವರಿ ಮೊದಲ ವಾರ ಮುಂಬಯಿಂದ ಹೊರಟು ಪಶ್ಚಿಮ ಮತ್ತು ಪೂರ್ವ ತೀರ ಪ್ರದೇಶಗಳಿಗೆ ಭೇಟಿ ನೀಡಿ ಏಪ್ರಿಲ್ ಮೊದಲ ವಾರದಲ್ಲಿ ಹಿಂದುರುಗುತ್ತಿತ್ತು. ಮೇವರೆಗೆ ರಜೆ. ಮತ್ತು ಜೂನ್ ಮೊದಲವಾರ ಬೇಸಿಗೆ ಅಭ್ಯಾಸಗಳಿಗಾಗಿ ಮತ್ತೆ ಸಮುದ್ರಯಾನ . ಬ್ರಿಟನ್, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನೌಕೆಗಳು ಒಂದೆಡೆ ಸೇರಿ ಮೂರುವಾರದ ಅಭ್ಯಾಸದಲ್ಲಿ ತೊಡಗುವುವು. ಇದಾದ ನಂತರ ಭಾರತದ ನೌಕೆ ಒಂದಾದರೂ ವಿದೇಶ ಪ್ರಯಾಣ ಕೈಗೊಂಡೇ ತೀರುವುದು. 
ಭಾರತೀಯ ನೌಕಾದಳ ಬಲು ಬೇಗ ವಿಸ್ತಾರವಾಯಿತು. ಪ್ರತಿಯೊಬ್ಬರಿಗೂ ಕಾಲಕಾಲಕ್ಕೆ ಬಡ್ತಿ. ಕೆಲವರಿಗೆ ಮುಂಚೆಯೇ, ಬಡ್ತಿ ದೊರಕದಿದ್ದಾಗ ಅವರೇನೂ ಕೂಗಿ ಹುಚ್ಚೆದ್ದು ಕುಣಿದು ಗಲಾಟೆ ಎಬ್ಬಿಸಿ ಕೊರಗುತ್ತಿರಲಿಲ್ಲ. ಅರ್ಜಿಗಳಿಗೆ ಅವಕಾಶವಿರಲಿಲ್ಲ. ಯಾರೂ ಕೋರ್ಟು ಮೆಟ್ಟಿಲು ಹತ್ತಲಿಲ್ಲ. ಕೋರ್ಟ್‍ಮಾರ್ಷಲ್ ನಡೆಯುತ್ತಲೇ ಇರಲಿಲ್ಲ. ಅಷ್ಟು ವಿರಳ. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಜವಾಬ್ದಾರಿ ಹೊತ್ತು ಅವರ ತರಬೇತಿ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಕಿರಿಯ ಅಧಿಕಾರಿಗಳೂ ಮೇಲ್ಮಟ್ಟದ ಅಧಿಕಾರಿಗಳಲ್ಲಿ ಗೌರವ ವಿಶ್ವಾಸ ಇಟ್ಟುಕೊಂಡಿದ್ದರು. ಕತ್ತಿ ಮಸೆಯುವ ಕಸರತ್ತು ಇರಲೇ ಇಲ್ಲ. ಅದೊಂದು ಸಂತುಷ್ಟದಳ.
1971ರ ಪಾಕಿಸ್ತಾನ ಯುದ್ಧದ ವೇಳೆಗೆ ಅಲ್ಲಿ ಅಧಿಕಾರಿಗಳೆಲ್ಲರೂ ಮೇಲ್ದರ್ಜೆಯವರಾಗಿದ್ದರು. ನೌಕಾಬಲವನ್ನು ಅವರು ಸುಸಜ್ಜಿತವಾಗಿ ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಉತ್ತಮವಾಗಿ ಮುಂದಿನ ಪೀಳಿಗೆಗೆ ಬಿಟ್ಟುಕೊಡಲು ನಿರ್ಧರಿಸಿದ್ದರು. ಹೀಗಾಗಿ ಒಂದು ಒಳ್ಳೆಯ ಕಸಬುದಾರಿಕೆಯ ನಿಖರವಾದ ಪೈಪೋಟಿ ಸೇನೆಯೊಂದು ಬೆಳೆಯಿತು. ಆಧುನಿಕ ಹಡಗುಗಳು, ವೈಜ್ಞಾನಿಕ ಉಪಕರಣಗಳ ಜೋಡಣೆ, ಆಧುನಿಕ ಶಸ್ತ್ರಾಸ್ತ್ರಗಳು ಮದ್ದುಗುಂಡು ಫಿರಂಗಿ, ಸೂಕ್ಷ್ಮ ರಾಡಾರುಗಳೂ ನೌಕಾಬಲದಲ್ಲಿ ಸೇರ್ಪಡೆಯಾದುವು. ಅನೇಕ ಸೆಮಿನಾರುಗಳಲ್ಲಿ ಕಾರ್ಯಕ್ಷಮತೆ, ಕಾರ್ಯತಂತ್ರಗಳನ್ನು ವಿಶ್ಲೇಷಿಸಲಾಯಿತು. ಈಗ ನೌಕಾಬಲ ಕೇವಲ ತುಕಡಿಯಾಗಿ ಉಳಿದಿಲ್ಲ (2005).
	ಈಚೆಗಷ್ಟೆ ಅಂತರರಾಷ್ಟ್ರೀಯ ನೌಕಾ ಬಲದ ಪುನರಾವಲೋಕನ ಮುಂಬಯಿಯಲ್ಲಿ ನಡೆಯಿತು. ಆಗ ನುರಿತ 16 ಛೀ¥sóïಆ¥sóï ನೇವಲ್ ಸ್ಟಾಫ್‍ಗಳೂ ಒಂದು ಡಜನ್ ಫ್ಲ್ಯಾಗ್ ಆಫೀಸರುಗಳೂ ಸೆಮಿನಾರಿನಲ್ಲಿ ಭಾಗವಹಿಸಿದ್ದರು. ಭಾರತೀಯ ಸೇನಾ ಪಡೆಯ ಧ್ಯೇಯವಾಕ್ಯ “ಸ್ನೇಹ ಸೇತುವೆ ನಿರ್ಮಾಣ” ಮತ್ತು “ಹೊರಕ್ಕೆ ಬರುವುದು”.
ಭಾರತೀಯ ನೌಕಾಪಡೆಯ ಭವಿಷ್ಯ: ಯುದ್ಧಕಲೆಗಳು ಎರಡು ಸೋವಿಯತ್ ಮಾದರಿ, ಬ್ರಿಟಿಷ್ ಮಾದರಿ. ಬ್ರಿಟಿಷ್ ಮಾದರಿಯಲ್ಲಿ ಕಾರ್ಯತಂತ್ರದ ಜೊತೆಗೆ ಭೂ ಆಧಾರಿತ ನೌಕಾಪಡೆ ಮತ್ತು ಜಲಾಧಾರಿತ ನೌಕಾಪಡೆ ಎರಡರ ಬಲಪ್ರಯೋಗವೂ ಇದೆ. ಹೆಚ್ಚಿನ ಅಡ್ಮಿರಲ್‍ಗಳು ಅಮೆರಿಕದ ನೇವಲ್‍ವಾರ್ ಕಾಲೇಜಿನಲ್ಲಿ ಓದಿದವರು. ಕೆಲವರು ಹಿಂದೂ ಮಹಾಸಾಗರವನ್ನು ಭಾರತದ ನೌಕಾಪಡೆಗೆ ಸೇರಿದ್ದೆಂದು ಭಾವಿಸಿದರೆ ಕೆಲವರು ವಿಸ್ತøತ ಅರ್ಥದಲ್ಲಿ ವಿಶ್ವ ಕಡಲ ತೀರಗಳ ರಕ್ಷಣೆಯ ಸಾಮೂಹಿಕ ಒಳಿತಿಗಾಗಿ ಬಳಸಬೇಕೆಂದು ನಂಬುತ್ತಾರೆ. ಈ ಹಿನ್ನೆಲೆಯಿಂದ ನೋಡಿದಾಗ ನಾಲ್ಕು ದಾರಿಗಳು ಕಾಣಬರುತ್ತವೆ.
1. ಸೋವಿಯತ್ ಮಾದರಿಯ ಕಡಿಮೆ ವಿಘ್ನ ಒಡ್ಡುವ ನೌಕಾದಳ ಬಲಹೀನ ದೂರದೃಷ್ಟಿ ಉಳ್ಳದ್ದು. ಏಕೆಂದರೆ ಪಾಕಿಸ್ತಾನದ ಜೊತೆ ಬೈಜಿಶಾಸ್ತ್ರದ ಪ್ರಯೋಗದ ಸಮಯದ ವೇಳೆ ಭೂ ಮತ್ತು ವಾಯು ಪಡೆಗಳಿಗೆ ಒತ್ತಾಸೆಯಾಗಿರುವಷ್ಟರ ಕೆಳಮಟ್ಟಕ್ಕೆ ಇಳಿದು ಬಿಡುವ ಸಾಧ್ಯತೆ. ಪಾಕಿಸ್ತಾನ ತನ್ನ ಸಬ್‍ಮೆರೀನ್‍ಗಳಲ್ಲಿ ಬೈಜಿಕ ರಾಕೆಟ್‍ಗಳನ್ನು ಅಳವಡಿಸುವ ತಂತ್ರಕ್ಕೆ ನವದೆಹಲಿಯಲ್ಲಿ ಇತ್ತೀಚೆಗೆ ನಾವೂ ಸರಿಸಮಾನವಾಗಿರಬೇಕೆಂದು ಹೇಳಿಕೆಕೊಟ್ಟಿದೆ. ಸೋವಿಯತ್ ರಷ್ಯಾದ ಗೂಡುಕಟ್ಟುವ ನೀತಿ ಏನೂ ಸಾಧಿಸದೆ ಎಲ್ಲೂ ತಲುಪದ ನೌಕಾಸೇನೆ.
2. ಕಡಲ ನಿರಾಕರಣೆ ನೀತಿ, ಇದು ಚೀನಾ ಅನುಸರಿಸುವ ತಂತ್ರ, ಬೇರೆ ಸೈನ್ಯಗಳು ಚೀನಾದ ದಕ್ಷಿಣ ಸಮುದ್ರದ ಒಳಗೆ ಪ್ರವೇಶಿಸದಂತೆ ತಡೆಹಿಡಿಯುವುದು. ಶತ್ರು ಹಡಗುಗಳ ಸಾಮಥ್ರ್ಯವನ್ನು ಮೊಟಕುಗೊಳಿಸುವುದು, ಆಕ್ರಮಣಕಾರಿ ಸಬ್‍ಮೆರೀನ್‍ಗಳ ಮೇಲೆ ನಿಗಾ ಇಡುವುದು.
3. ಸಮುದ್ರ ಮಾರ್ಗಗಳ ಮೂಲಕ ವಿನಿಮಯ-ಸ್ಥಿರತೆಯ ನೌಕಾಬಲ (ಬ್ರಿಟಿಷ್ ಮಾದರಿ) ಹಿಂದೂ ಮಹಾಸಾಗರದಲ್ಲಿ ಮುಕ್ತ ವ್ಯಾಪಾರಕ್ಕೆ ಮಾರ್ಗಗಳನ್ನು ಮೊಟಕು ಮಾಡುವುವು.
4. ಅಂತಾರಾಷ್ಟ್ರೀಯ ಸಮನ್ವಯ ನೌಕಾಪಡೆ-ಅತ್ಯುತ್ತಮ ಮಾದರಿ ಇದರ ಮುಖ್ಯಾಂಶಗಳು.
	ಅ) ಪಾಕ್ ಮತ್ತು ಚೀನಾಗಳೊಡನೆ ಭೂಸಂಬಂಧ ಹಗೆತನವನ್ನು ಕಡಿಮೆಮಾಡಿಕೊಳ್ಳುವುದು.
	ಆ) ಶೇ 15ಕ್ಕಿಂತ ಹೆಚ್ಚಿನ ಹಣವನ್ನು ಭಾರತೀಯ ನೌಕಾಪಡೆಗೆ ವಿನಿಯೋಗಿಸುವುದು.
12 ಅಂಶಗಳ ಸೂತ್ರ: 1. ಭೂ ಮತ್ತು ವಾಯು ಸೇನೆಗಳಿಗೆ ಹೋಲಿಸಿದರೆ ನೌಕಾದಳಕ್ಕೆ ಬಲವಿಲ್ಲ. ಆದ್ದರಿಂದ ಭೂ ಮತ್ತು ವಾಯು ಸೇನೆಗಳನ್ನು ದೇಶ ರಕ್ಷಣೆಗೂ ನೌಕಾಬಲವನ್ನು ಸಾಗರದಡಿ ರಕ್ಷಣೆಗೂ ಅವಶ್ಯವಾಗುವಂತೆ ಗಮನಹರಿಸಬೇಕು.
2. ಜಾಗತೀಕರಣ ಕಲ್ಪನೆ ರಾಷ್ಟ್ರ ರಕ್ಷಣೆಯ ಅರ್ಥವ್ಯಾಪ್ತಿಯನ್ನು ಮೊಟಕುಗೊಳಿಸುತ್ತದೆ. ಜಾಗತೀಕರಣ ಹೆಸರಿನಲ್ಲಿ ಇತರ ದೇಶಗಳ ಕೋಟ್ಯಧಿಪತಿಗಳನ್ನು ಓಲೈಸುತ್ತದೆ. ನಮ್ಮ ಕಡಲುಗಳಲ್ಲಿ ಬೇರೆ ರಾಷ್ಟ್ರಗಳು ಅಣುಇಂಧನಗಳನ್ನು ತುಂಬಿಟ್ಟುಕೊಳ್ಳುವುದನ್ನು ತಪ್ಪಿಸಬೇಕು.
3. ನೌಕಾ ಚಟುವಟಿಕೆಗಳು ಒಳನಾಡಿನ ಮೇಲೆ ಪ್ರಭಾವ ಬೀರಬೇಕು.
4. ಅಂತಾರಾಷ್ಟ್ರೀಯ ಕದನಗಳಲ್ಲಿ ನಿರ್ಭಯವಾಗಿ ಹುಡುಕಾಡಿ ಬಂದ ಅವಕಾಶಗಳನ್ನು ಚೆನ್ನಾಗಿಯೂ ಸಮರ್ಥವಾಗಿಯೂ ಉಪಯೋಗಿಸಿಕೊಳ್ಳಬೇಕು. ಸಣ್ಣ ಸಂಘಟನೆಗಳಿಗೆ ಸ್ಥಳೀಯ ಆಸಕ್ತಿಗಳಿರುತ್ತವೆ. ದೊಡ್ಡ ಶಕ್ತಿಗಳಿಗೆ ಮಾತ್ರ ಹೆಚ್ಚು ಬಾಧ್ಯತೆ ಇರುತ್ತದೆ.
5. ಯುದ್ಧ ಕೌಶಲದ ಬಗ್ಗೆ ಸ್ಪಷ್ಟ ಜ್ಞಾನ, ಮಾಹಿತಿಗಳನ್ನು ಬೆಳೆಸಿಕೊಳ್ಳಬೇಕು.
6. ನೆರೆರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು.
7. ಪಾಕ್ ಮತ್ತು ಚೀನಾ ವ್ಯಾಜ್ಯಗಳಲ್ಲಿ ಸಣ್ಣ ಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಂಡು ನೌಕಾಬಲವನ್ನು ವಿಸ್ತರಿಸಬೇಕು.
8. ವಿಶ್ವದ ಅರಕ್ಷಿತ ಕಡಲ ತೀರಗಳ ಬಗ್ಗೆ ಕೂಲಂಕಷ ಸಮೀಕ್ಷೆ ನಡೆಸಿ ಇಂಥವನ್ನು ಬೆಂಬಲಿಸಿ ದೃಢಗೊಳಿಸಬೇಕು (ಉದಾ ಗೋಲ್ಡನ್ ಕ್ರೆಸ್ಟ್ ಮತ್ತು ಗೋಲ್ಡನ್ ಟ್ರಯಾಂಗಲ್) ಪರಿಸರದ ಹಾನಿಗಳು, ಏರುವ ಕಡಲಮಟ್ಟ, ಬದಲಾಗುವ ಹವಾಮಾನಗಳ ಬಗ್ಗೆ ಗಮನವಿರಿಸಬೇಕು. ನೌಕಾಸೇನೆಯನ್ನು ಸ್ಥಳೀಯ ರಕ್ಷಣಾ ವ್ಯವಸ್ಥೆಗೆ ಉಪಯೋಗಿಸಿಕೊಳ್ಳುವುದು.
9. ಒಂದು ನೌಕಾಪಡೆಯಿಂದ ಇನ್ನೊಂದು ನೌಕಾ ಪಡೆಯ ಮಧ್ಯೆ ಮಿಲಿಟರಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದು. ಅಮೆರಿಕ ಸಂಯುಕ್ತ ರಾಷ್ಟ್ರಗಳ ನೌಕಾ ಪಡೆಗಳು ವಿಶ್ವದಲ್ಲೇ ವಿಶಿಷ್ಟವಾದವು. ಅವು ಕಾರ್ಯಾಚರಣೆಯ ಮಾನದಂಡಗಳನ್ನು ವಿಪರೀತ ಒಡ್ಡುತ್ತವೆ. ರಾಜತಾಂತ್ರಿಕ ಒಪ್ಪಂದಗಳನ್ನು ಗಾಳಿಗೆ ತೂರುತ್ತವೆ.
10. ಈ ಶೀತಲ ಸಮರದ ದೆಸೆಯಿಂದ ಬೇರೆಯಾಗಿ ಉಳಿದಿರುವುದರ ಪರಿಸ್ಥಿತಿಯಿಂದ ಎಚ್ಚೆತ್ತುಕೊಂಡು ಅಂತಾರಾಷ್ಟ್ರೀಯ ರಕ್ಷಣೆಯ ಬಗ್ಗೆ ಹೊಸ ಸಂದೇಶಗಳನ್ನು ಒಯ್ಯುವುದು.
ನಡೆದು ಬಂದ ದಾರಿ: 
5-9-1612
ಬ್ರಿಟಿಷ್ ಯುದ್ಧ ಹಡಗುಗಳ ಮೊದಲನೆಯ ಸ್ಕ್ವಾಡ್ರನ್ ಸೂರತ್‍ನಲ್ಲಿ ಲಂಗರು ಹೂಡುತ್ತದೆ. “ಇಂಡಿಯನ್ ಮೆರೀನ್” ಅಥವಾ ಆನರಬಲ್ ಈಸ್ಟ್ ಇಂಡಿಯಾ ಕಂಪೆನಿ ಮೆರೀನ್ ಸ್ಥಾಪನೆ, ಕಡಲ ಕದನದಲ್ಲಿ ಪೋರ್ಚುಗೀಸರ ಸೋಲು.

1614
ಇಂಡಿಯನ್ ಮೆರೀನ್‍ಗೆ ಪೋರ್ಚುಗೀಸರ ವಿರುದ್ಧ ಎರಡನೆಯ ಕಡಲ ಕದನದಲ್ಲಿ ಜಯ

1635
ಮೋಟರು ಚಾಲಿತ 4 ಕಿರು ದೋಣಿಗಳನ್ನು ಸೂರತ್‍ನಲ್ಲಿ ನಿರ್ಮಿಸಲಾಯಿತು.

27-3-1668
ವರ್ಷಕ್ಕೆ 10 ಪೌಂಡುಗಳ ಬಾಡಿಗೆಗೆ ಮುಂಬಯಿಯನ್ನು ಈಸ್ಟ್ ಇಂಡಿಯಾ ಕಂಪೆನಿಗೆ ವರ್ಗಾವಣೆ ಮಾಡಲಾಯಿತು.

1686
ಇಂಡಿಯನ್ ಮೆರೀನ್ ಕೇಂದ್ರ ಕಛೇರಿಯನ್ನು ಮುಂಬಯಿಗೆ ಸ್ಥಳಾಂತರಿಸಲಾಯಿತು. ಇಂಡಿಯನ್ ಮೆರೀನ್‍ಗೆ ಹೊಸ ಹೆಸರು `ಬಾಂಬೆ ಮೆರೀನ್

1700
ಮರಾಠಾ ನೌಕಾಧಿಕಾರಿ ಖನೋಜಿ ಆಂಗ್ರೆ ಅಧಿಕಾರಕ್ಕೆ, ತನ್ನದೇ ಆದ ಪ್ರಬಲ ನೌಕಾದಳದ ಸ್ಥಾಪನೆ. 

1717-1724
ಘೇರಿಯಾ (ವಿಜಯ ದುರ್ಗ) ವನ್ನು ಗೆದ್ದು ಕೊಳ್ಳಲು ಡಚ್ ಮತ್ತು ಬ್ರಿಟಿಷರು ಇಬ್ಬರೂ ವಿಫಲ. ಮತ್ತೆ ಮತ್ತೆ ದಾಳಿ ಮಾಡಿದಾಗಲೂ ಅಡ್ಮಿರಲ್ ಆಂಗ್ರೆಯ ಕಪಿಮುಷ್ಟಿ

1735
ಮುಂಬಾಯಿಯ ಲೋಜೀವಾಡಿಯಾದಲ್ಲಿ ಡಾಕ್‍ಯಾರ್ಡ್ ಸ್ಥಾಪನೆ,

1758-1760
ಅಡ್ಮಿರಲ್ ಪೊಕೊಕ್ ನೇತೃತ್ವದಲ್ಲಿ ಬಾಂಬೆ ಮೆರೀನ್, ಫ್ರೆಂಚ್ ನೌಕಾದಳವನ್ನು ಗೆದ್ದು ಭಾರತದ ಸುತ್ತ ಮುತ್ತಲ ಸಮುದ್ರ ಪ್ರದೇಶ ಅನುಮಾನಕ್ಕೆಡೆಯಿಲ್ಲದಂತೆ ಬ್ರಿಟಿಷರ ಅಧಿಪತ್ಯಕ್ಕೆ ಒಳಪಡುತ್ತದೆ.

1817
ಮುಂಬಯಿ ಡಾಕ್‍ಯಾರ್ಡ್‍ನಲ್ಲಿ (ಹಡಗುಕಟ್ಟೆ) ಎಚ್.ಎಂ.ಎಸ್.ಟ್ರೆಂಕಾಮಲಿ ಹಡಗು ನಿರ್ಮಾಣ, ಅದೇ ಹಡಗು ಟಿ.ಎಸ್/ ಪೌಂಡ್ರೋಯಂಟ್ ಹೆಸರಿನಲ್ಲಿ ಇಂದಿಗೂ ವಿಶ್ವದ ಅತ್ಯಂತ ಹಳೆಯ ಮರದ ಹಾಯಿ ದೋಣಿಯಾಗಿ ಪೋರ್ಟ್‍ಮೌತ್‍ನಲ್ಲಿ ಕಾರ್ಯನಿರ್ವಹಣೆ.

1824
ಬರ್ಮಾ ಎದುರು ಯುದ್ಧದಲ್ಲಿ `ಡಯಾನಾ ಪ್ರಥಮ ಉಕ್ಕಿನ ಹಡಗಿನ ಪಾತ್ರ

1830
`ಬಾಂಬೆ ಮೆರೀನ್‍ಗೆ `ಇಂಡಿಯನ್ ನೇವಿ ಎಂದು ನಾಮಕರಣ, ಮುಂದಿನ 15 ವರ್ಷಗಳಲ್ಲಿ ಕಂಪೆನಿಯ ಎಲ್ಲಾ ಹಾಯಿ ದೋಣಿಗಳಿಗೂ ಸ್ಟೀಮ್ ಎಂಜಿನ್ ಅಳವಡಿಕೆ.

1856
ಪರ್ಷಿಯನ್ ಯುದ್ಧ, ಇಂಡಿಯನ್ ನೇವಿಯಿಂದ ಸಮರಯಾನ. 

1858
ಬ್ರಿಟಿಷ್ ಸಾಮ್ರಾಜ್ಯಕ್ಕೆ ವರ್ಗಾವಣೆ `ಇಂಡಿಯನ್ ನೇವಿಗೆ ಮರು ಹೆಸರು ಹರ್ ಮೆಜೆಸ್ಟೀಸ್ ಇಂಡಿಯನ್ ನೇವಿ.

30-4-1863
ಯುದ್ಧ ಹಡಗುಗಳನ್ನು ವ್ಯಾಪಾರೀ ನೌಕೆಗಳಾಗಿ ಪರಿವರ್ತನೆ ನೇವಿಯ ಮೌಲ್ಯ ಕುಸಿತ, ಬಾಂಬೆ ಮೆರೀನ್, ಬೆಂಗಾಲ್ ಮೆರೀನ್ ಎಂದು ಇಬ್ಭಾಗ, ಮೆರೀನ್ ಸರ್ವೆ ಸಂಸ್ಥೆಯ ಸ್ಥಾಪನೆ. ಅದರ ನಿರ್ವಹಣೆಗೆ ನೌಕಾಸಿಬ್ಬಂದಿ ನಾಮಕರಣ.

1877
ಮತ್ತೆ ನೌಕಾಪಡೆಯ ಸ್ಥಾನಮಾನ `ಹರ್ ಮೆಜೆಸ್ಟೀಸ್ ಇಂಡಿಯನ್ ಮೆರೀನ್ ಎಂದು ನಾಮಕರಣ

1892
ಪಡೆಯ ಸೇವೆಗಳನ್ನು ಗುರುತಿಸಿ `ರಾಯಲ್ ಇಂಡಿಯನ್ ಮೆರೀನ್ ಎಂದು ನೇಮಕ 

1910
ಆರ್.ಐ.ಎಂ. ಅಧಿಕಾರಿ ಎಚ್.ಆರ್. ಬೋವರ್ಸ್ ಕ್ಯಾಪ್ಟನ್ ಸ್ಕಾಟ್ ಜೊತೆಗೂಡಿ ದಕ್ಷಿಣ ಧ್ರುವಕ್ಕೆ ಪ್ರಯಾಣ.

1914-1918
ಮೊದಲ ವಿಶ್ವಮಹಾಯುದ್ಧ ಪ್ರತಿ ಭಾಗದಲ್ಲೂ ಆರ್.ಐ.ಎಂ.ನ ಪಾಲ್ಗೊಳ್ಳುವಿಕೆ 

6-1-1928
ಆರ್.ಐ.ಎಂ. ಗೆ ಭಾರತೀಯ ಇಂಜಿನಿಯರ್ ಸಬ್ ಲೆಫ್ಟಿನೆಂಟ್ ಡಿ.ಎನ್.ಮುಖರ್ಜಿ ನೇಮಕ

1934
ಸೇವೆಗಳಿಗೆ ರಾಯಲ್ ಇಂಡಿಯನ್ ನೇವಿ (ಖIಓ) ಎಂದು ನಾಮಕರಣ. ನೌಕಾಕೇಂದ್ರ ಮುಂಬಾಯಿಯಲ್ಲಿ ಫ್ಲಾಗ್ ಆಫೀಸರ್ ಅಧೀನದಲ್ಲಿ ಸ್ಥಾಪನೆ

1939-1945
ಎರಡನೆ ವಿಶ್ವ ಮಹಾಯುದ್ಧ ಎಲ್ಲ್ಲ ಮುಂಚೂಣಿಗಳಲ್ಲೂ ಆರ್.ಐ.ಎನ್. ಎಚ್.ಎಂ.ಐ.ಎಸ್.ಬೆಂಗಾಲ್ ನೌಕೆಯಿಂದ ಜಪಾನಿನ ರೈಡರ್‍ನಾಶ.

1946
ದೊಡ್ಡ ಪ್ರಮಾಣದಲ್ಲಿ ನಾವಿಕರ ಬರಖಾಸ್ತು. ಇದರಿಂದಾಗಿ ನೌಕಾದಳದಲ್ಲಿ ದಂಗೆ.

15-8-1947
ಭಾರತಕ್ಕೆ ಸ್ವತಂತ್ರ ಪ್ರಾಪ್ತಿ. ಜುನಾಗಢದಲ್ಲಿ ಸೈನ್ಯ ಜಮಾವಣೆ

1948
ಆರ್.ಐ.ಎನ್.ಗೆ ಎಚ್.ಎಂ.ಐ.ಎಸ್. ಡೆಲ್ಲಿ (ಮುಂಚಿನ ಹೆಸರು ಎಚ್.ಎಂ.ಎಸ್ ಅಖಿಲ್ಲೆಸ್) ಸಂಚಾರಿ ನೌಕೆಯ ಸೇರ್ಪಡೆ. ಮೊಟ್ಟಮೊದಲ ಸ್ನೇಹಯಾನ-ಪೂರ್ವ ಆಫ್ರಿಕಾ ಸೈಷೆಲೆಸ್ ಮತ್ತು ಮಾರಿಷಸ್ ದೇಶಗಳಿಗೆ ಭೇಟಿ.

26-1-1950
ಪ್ರಜಾಪ್ರಭುತ್ವ ಪೋಷಣೆ. ಸರ್ವಿಸಸ್‍ಗೆ ಹೆಸರು `ಇಂಡಿಯನ್ ನೇವಿ ಎಂದು ಬದಲಾವಣೆ ಮತ್ತು ಇಂಡಿಯನ್ ಆರ್ಮಿಯಿಂದ ಬೇರ್ಪಡೆ.

ಜೂನ್ 1950
ಐ.ಎನ್.ಎಸ್ ಡೆಲ್ಲಿಯಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಇಂಡೋನೇಷ್ಯಾಗೆ ಪ್ರಯಾಣ.

27-5-1951
ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರಿಂದ `ಇಂಡಿಯನ್ ನೇವಿಗೆ `ಕಲರ್ಸ್ ಪ್ರದಾನ.

11-5-1953
ಮೊದಲ ನೌಕಾಪಡೆಯ ವಾಯುನೆಲೆ ಐ.ಎನ್.ಎಸ್. ಗರುಡದ ಪ್ರಾರಂಭೋತ್ಸವ, ಕೊಚ್ಚಿನ್‍ನಲ್ಲಿ ಜರಗಿತು-550 ಸ್ಕ್ವಾಡ್ರನ್ ಚಾಲನೆಗೆ.

10-10-1953
ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರಿಂದ `ಇಂಡಿಯನ್ ನೌಕಾದಳದ ಮೊತ್ತ ಮೊದಲ ಪರಿವೀಕ್ಷಣೆÉ - 25 ಯುದ್ಧ ಹಡಗುಗಳು 7 ಯಾರ್ಡ್ ಕ್ರಾಫ್ಟ್‍ಗಳು ಒಂದು ವ್ಯಾಪಾರಿ ಹಡಗೂ ಭಾಗವಹಿಸಿದ್ದುವು.

2-10-1956
ಫ್ಲಾಗ್ ರ್ಯಾಂಕ್ ಪದವಿಗೆ ಮೊತ್ತಮೊದಲ ಭಾರತೀಯನ ನೇಮಕ

28-8-1957
ಐ.ಎನ್.ಎಸ್. ಮೈಸೂರು (ಹಿಂದಿನ ಹೆಸರು ಎಚ್.ಎಂ.ಎಸ್. ನೈಜೀರಿಯಾ) ಮತ್ತು ಡಬ್ಲ್ಯೂ.ಡಬ್ಲ್ಯೂ.2 ಫಿಜಿಕ್ಲಾಸ್ ಬ್ರಿಟಿಷ್ ಕ್ರೂಯಿಸರ್ ಕಾವಲು ಹಡಗುಗಳ ಸೇರ್ಪಡೆ.

ಡಿಸೆಂಬರ್ 1957
`ನೇವಿ ಆಕ್ಟ್ ಫೋಷಣೆ

22-4-1958
ಮೊದಲ ಛೀಫ್ ಆಫ್ ಸ್ಟಾಫ್ ಆಗಿ ವೈಸ್ ಅಡ್ಮಿರಲ್ ಆರ್. ಡಿ. ಕಟಾರಿ ನೇಮಕ 

1960
`ಸೀಹಾಕ್ ಏರ್‍ಕ್ರಾಫ್ಟ್ ವಿಮಾನಗಳನ್ನು ಹೊತ್ತ 310 ಕೋಬ್ರಾ ಸ್ಕ್ವಾಡ್ರನ್ ಚಾಲನೆಗೆ.

16-2-1961
ಐ.ಎನ್. ಎಸ್ ವಿಕ್ರಾಂತ್ ಆರ್-11(ಹಿಂದಿನ ಹೆಸರು ಎಚ್.ಎಮ್.ಎಸ್ ಹರ್‍ಕ್ಯುಲಸ್) ವಿಮಾನಗಳನ್ನೂ ಸಾಗಿಸಬಲ್ಲ ಹಡಗಿನ ಸೇರ್ಪಡೆ (ಇತ್ತೀಚೆಗೆ ಐ.ಎನ್.ಎಸ್. ವಿರಾಟ್ ಸೇರ್ಪಡೆ)

20-4-1964
ರಕ್ಷಣಾ ಮಂತ್ರಿ ಶ್ರೀ ವೈ.ಬಿ. ಚವ್ಹಾಣರಿಂದ ನೌಕಾ ಪಡೆಗಳ ವೀಕ್ಷಣೆ,

1965
ಲೆಫ್ಟಿನೆಂಟ್ ಕಮಾಂಡರ್ ಎಂ.ಎಸ್. ಕೊಹ್ಲಿ ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತುವುದರ ಮೂಲಕ ವಿಶ್ವದ ಅತಿ ಎತ್ತರಗಳಲ್ಲಿ ಭಾರತೀಯ ನೌಕಾ ನಿಶಾನೆಯ ಸ್ಥಾಪನೆ.

10-2-1966
ರಾಷ್ಟ್ರಪತಿ ಶ್ರೀ ಎಸ್. ರಾಧಾಕೃಷ್ಣನ್ ಅವರಿಂದ ವೀಕ್ಷಣೆ. ಐ.ಎನ್.ಎಸ್ ವಿಕ್ರಾಂತ್ ಪ್ರದರ್ಶನ 

8-12-1967
ಐ.ಎನ್.ಎಸ್. ಕಲವಾರಿ ಸಬ್‍ಮೆರೀನ್ ಸೇರ್ಪಡೆ. ಸೈಲೆಂಟ್ ಸರ್ವೀಸ್ ಆರಂಭ 

15-3-1969
ಹೆಲಿಕಾಪ್ಟರ್ ವಾಹಕ 321 ಏಂಜಲ್ಸ್‍ಗೆ ಚಾಲನೆ

28-12-1969
ರಾಷ್ಟ್ರಪತಿ ಶ್ರೀ ವಿ.ವಿ ಗಿರಿಯವರಿಂದ ವೀಕ್ಷಣೆ 31 ಯುದ್ಧ ಹಡಗುಗಳು 5 ವ್ಯಾಪಾರಿ ಹಡಗುಗಳು ಮತ್ತು ಸಬ್‍ಮೆರೀನ್ ಪೆರೇಡು.

1971
ರಷ್ಯಾದಿಂದ ಮೊದಲ ಓಸಾ_ಐ ಕ್ಷಿಪಣಿ ಬೋಟುಗಳ ಖರೀದಿ.

4-12-1971
ಪಾಕಿಸ್ತಾನದ ಜೊತೆಯುದ್ಧ. `ಇಂಡಿಯನ್ ನೇವಿಯ ಪ್ರಮುಖ ಪಾತ್ರ `ನೇವಿ ಡೇ ಆಚರಣೆ ಪ್ರಾರಂಭ.

23-6-1972
ಆಧುನಿಕ ಯುದ್ಧ ವಿಮಾನ ಐ.ಎನ್.ಎಸ್. ನೀಲಗಿರಿ ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣ. ಐ.ಎನ್.ಎಸ್. ಖುಕ್ರಿ ಜಲಾಂತರ್ಗಾಮಿಗಳ ವಿರುದ್ಧ ಹೋರಾಡಲು ನಿರ್ಮಿಸಿದ ಹಡಗು 14 ದಿನ ಪಾಕಿಸ್ತಾನದ ಜೊತೆಯುದ್ಧದಲ್ಲಿ ನೀರಿನಲ್ಲಿ ಮುಳುಗಿ ಜಲಸಮಾಧಿ. 

1976
312 ಅಲ್‍ಬಟ್ರಾಸ್ ಚಾಲನೆ

1977
ಕ್ವೀನ್ ಎಲಿಜಬೆತ್‍ರ ಪಟ್ಟಾಭಿಷೇಕದ ರಜತ ಮಹೋತ್ಸವದ ಸಂದರ್ಭದಲ್ಲಿ ಐ.ಎನ್.ಎಸ್ ಉದಯಗಿರಿ ಪಾಲ್ಗೊಳ್ಳುವಿಕೆ.

10-10-1977
315 ವಿಂಗ್ಡ್ ಸ್ಟಾಲಿಯನ್ಸ್ (ಐ.ಎಲ್.38ರ ಏರ್‍ಕ್ರಾಫ್ಟ್ ವಿಮಾನವಾಹಕ) ಚಾಲನೆಗೆ

1978
ಐ.ಎನ್.ಎಸ್. ಡೆಲ್ಲಿ ನಿವೃತ್ತಿ (30 ವರ್ಷಗಳ ಸೇವಾನಂತರ)

30-9-1980
ಐ.ಎನ್.ಎಸ್ ರಾಜಪೂತ ಚಾಲನೆಗೆ. ಇದು ಮೊದಲ ಕ್ಷಿಪಣಿನಾಶಕ. 

1981
1. ಅಂಟಾರ್ಕ್‍ಟಿಕಾಗೆ ಯಾನ
2. 25 ಹೆಲಿಕಾಫ್ಟರುಗಳನ್ನೊಳಗೊಂಡ "333 ಈಗಲ್ಸ್ ಸ್ಕ್ವಾಡ್ರನ್" ಚಾಲನೆಗೆ 

1982
25 ವರ್ಷಗಳ ಸೇವಾನಂತರ ಐಎನ್‍ಎಸ್ ಮೈಸೂರಿಗೆ ನಿವೃತ್ತಿ

12-2-1984
ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್‍ರಿಂದ ವೀಕ್ಷಣೆ-ರಜಪೂತ ಡಿಸ್ಟ್ರಾಯರ್ಸ್ ಗೋದಾವರಿ ಫ್ರೀಗೇಟ್ಸ್, ಸೀ ಹ್ಯಾರಿಯರ್ ಏರ್‍ಕ್ರಾಫ್ಟ್‍ಗಳ ಪೆರೇಡು 

26-11-1981 
ದಕ್ಷಿಣ ವಲಯ ನೇವಲ್ ಕಮಾಂಡಿಗೆ `ಕಲರ್ಸ್ ಗೌರವ ಪ್ರದಾನ.

12-5-1987
ಎರಡನೆಯ ಐಎನ್‍ಎಸ್ ವಿಕ್ರಾಂತ್ (ಮುಂಚಿನ ಹೆಸರು ಎಚ್‍ಎಂಎಸ್ ಹರ್ಮೆನ್)
ಶ್ರೀಲಂಕಾದಲ್ಲಿ ಇಂಡಿಯನ್ ಪೀಸ್‍ಕೀಪಿಂಗ್ ಫೋರ್ಸ್ (ಐಪಿಕೆಎಫ್)

5-12-1988
ಅಣುಚಾಲಿತ ಸಬ್‍ಮೆರೀನ್ “ಚಕ್ರ” 3 ವರ್ಷದ ಗುತ್ತಿಗೆಯ ಆಧಾರದ ಮೇಲೆ ರಷ್ಯಾದಿಂದ ವಿಶಾಖಪಟ್ಟಣ ಬಂದರಿಗೆ ಆಗಮನ ಇದು ತರಬೇತಿ ಸಬ್‍ಮೆರೀನ್.

1988
ಮಾಲಡೀವ್ ಸರ್ಕಾರದ ಕೋರಿಕೆಯ ಮೇರೆಗೆ ಹಿಂದೂಮಹಾಸಾಗರದಲ್ಲಿ ಭಯೋತ್ಪಾದನೆಯ ದಮನ.

15-2-1989
ರಾಷ್ಟ್ರಪತಿ ಆರ್. ವೆಂಕಟರಾಮನ್‍ರಿಂದ ವೀಕ್ಷಣೆ-86 ಭಾರತೀಯ ಯುದ್ಧ ಹಡಗುಗಳು, ಐಎನ್‍ಎಸ್ ವಿಕ್ರಾಂತ್, ವಿರಾಟ್ ಅಣು ಸಬ್ ಮೆರೀನ್ ಐಎನ್‍ಎಸ್ ಚಕ್ರಗಳು ಲೈನಿನಲ್ಲಿ 39 ಏರ್‍ಕ್ರಾಫ್ಟ್‍ಗಳ ಹಾರಾಟ ಪ್ರದರ್ಶನ.

31-1-1997
36 ವರ್ಷಗಳ ಸೇವಾನÀಂತರ ಐಎನ್‍ಎಸ್ ವಿಕ್ರಾಂತ್‍ಗೆ ವಿಶ್ರಾಂತಿ.

15-11-1997
ಭಾರತದಲ್ಲೇ ನಿರ್ಮಾಣವಾದ 75ನೇ ವಾಹಕ ಐಎನ್‍ಎಸ್ ಡೆಲ್ಲಿ ಡಿ61 ಚಾಲನೆಗೆ 

2-6-1999
ಐಎನ್‍ಎಸ್ ಮೈಸೂರು ಡಿ 60 ಚಾಲನೆಗೆ (81ನೇ ಭಾರತೀಯ ವಾಹಕ)

4-7-2000
ನ್ಯೂಯಾರ್ಕ್‍ನಲ್ಲಿ ಅಂತಾರಾಷ್ಟ್ರೀಯ ನೌಕಾ ಪ್ರದರ್ಶನದಲ್ಲಿ ಪ್ರೆಸಿಡೆಂಟ್ ಕ್ಲಿಂಟನ್‍ರವರ ನೇತೃತ್ವದಲ್ಲಿ ವೀಕ್ಷಣೆ.

22-1-2001
“ಡೆಲ್ಲಿ ಡಿಸ್ಟ್ರಾಯರ್”, ಐಎನ್‍ಎಸ್ ಮುಂಬಯಿ ಡಿ62 ಚಾಲನೆಗೆ

15 ರಿಂದ 19-2-2001
ರಾಷ್ಟ್ರಪತಿ ಕೆ.ಆರ್. ನಾರಾಯಣ್ ಅವರಿಂದ ಮುಂಬಯಿಯಲ್ಲಿ ವೀಕ್ಷಣೆ “ಬ್ರಿಡ್‍ಜಸ್ ಆಫ್ ಫ್ರೆಂಡ್‍ಷಿಪ್” ಹೆಸರಿನಲ್ಲಿ 45 ಭಾರತೀಯ ಯುದ್ಧ ಹಡಗುಗಳೂ 25 ವಿದೇಶೀ ಯುದ್ಧ ಹಡಗುಗಳೂ ಪಾಲ್ಗೊಂಡಿದ್ದುವು.

ಛೀಫ್ ಆಫ್ ನೇವಲ್ ಸ್ಟಾಫ್

ವೈಸ್ ಅಡ್ಮಿರಲ್ ಆರ್.ಪಿ. ಕಟಾರಿ
1958-1962

ವೈಸ್ ಅಡ್ಮಿರಲ್ ಬಿ.ಎಸ್. ಸೋಮನ್
1962-1966

ಅಡ್ಮಿರಲ್ ಎ.ಕೆ. ಚಟರ್ಜಿ
1966-1970

ಎಸ್.ಎಂ.ಗಂದಾ
1970-1973

ಎಸ್. ಎನ್, ಕೊಹ್ಲಿ
1973-1976

ಜೆ.ಎಲ್.ಕುರ್‍ಸೆಟ್‍ಜಿ
1976-1979

ಆರ್.ಎಲ್.ಪೆರೀರಾ
1979-1982

ಓ.ಎಸ್.ಡಾಸನ್
1982-1984

ಆರ್.ಎಚ್.ತೆಹಲಿಯಾನಿ
1984-1987

ಜೆ.ಜಿ. ನಾಡಕರ್ಣಿ
1987-1990

ಎಲ್. ರಾಮದಾಸ್
1990-1993

ವಿಜಯ್‍ಸಿಂಗ್ ಷೆಕಾವತ್
1993-1996

ವಿಷ್ಣು ಭಾಗವತ್
1996-1998

ಸುಶೀಲ್ ಕುಮಾರ್
1999-2001

ಮಾಧ್ವೇಂದ್ರ ಸಿಂಗ್
2001-2004

ಅರುಣ ಪ್ರಕಾಶ್
2004-

ಭಾರತೀಯ ಕಡಲ ತೀರದ ರಕ್ಷಣಾ ಪಡೆ
ಐಎನ್‍ಎಸ್ ಕದಂಬ: ಇದು ಸ್ವತಂತ್ರ ಪ್ಯಾರಾ ಮಿಲಿಟರಿ ಸೇವೆ. 19-8-1978ರ ವಿಶೇಷ ಕಾನೂನಿನ ಪ್ರಕಾರ ರಕ್ಷಣಾ ಮಂತ್ರಾಲಯದ ಅಧೀನದಲ್ಲಿ 28 ಲಕ್ಷ ಚ.ಕಿ.ಮೀ ವಿಸ್ತೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತದೆ. ಸುಂಕ ಅಧಿಕಾರಿಗಳಿಗೆ ಇದರಿಂದ ಹೆಚ್ಚು ಪ್ರಯೋಜನವಾಗಿದೆ. ಕಳ್ಳ ಸಾಗಾಣಿಕೆ ಬಹಳ ಕಡಿಮೆಯಾಗಿದೆ. ಪರಿಸರ ರಕ್ಷಣೆಯಲ್ಲಿ ಉಪಯೋಗವಾಗಿದೆ. ಕಾರವಾದಲ್ಲಿ ಸೀಬರ್ಡ್ ನೌಕಾನೆಲೆ ಸ್ಥಾಪಿತವಾಗಿರುವುದು ಭಾರತೀಯ ನೌಕಾದಳಕ್ಕೆ ಹೊಸದೊಂದು ಆಯಾಮ ದೊರೆತಂತಾಗಿದೆ.
ಬಾಧ್ಯತೆಗಳು
 * ಚಾಲ್ತಿಯಲ್ಲಿರುವ ಕಾನೂನುಗಳನ್ನು ಜಾರಿಗೊಳಿಸುವುದು
 * ಕಳ್ಳಸಾಗಣೆ ವಿರುದ್ಧ ಸುಂಕದ ಅಧಿಕಾರಿಗಳಿಗೆ ಬೆಂಬಲ
 * ಕಡಲ ಪರಿಸರ ನೈರ್ಮಲ್ಯ ಕಾಪಾಡುವುದು
 * ಕಡಲ ಸಂಬಂಧಿ ಅನಾಹುತಗಳಲ್ಲಿ ಜನ ಆಸ್ತಿಪಾಸ್ತಿಗೆ ರಕ್ಷಣೆ ಒದಗಿಸುವುದು
 * ಕೃತಕ ದ್ವೀಪಗಳ, ದೂರದ ಟರ್ಮಿನಲ್ಲುಗಳ ರಕ್ಷಣೆ, ನಿರ್ವಹಣೆ

ನೌಕಾದಳ ಸಿಬ್ಬಂದಿ
ನೌಕಾದಳದ ಸಮಾನ ಪದವಿ

ಡೈರೆಕ್ಟರ್ ಜನರಲ್
ವೈಸ್ ಅಡ್ಮಿರಲ್

ಇನ್‍ಸ್ಪೆಕ್ಟರ್ ಜನರಲ್
ರಿಯರ್ ಅಡ್ಮಿರಲ್

ಡೆ|| ಇನ್‍ಸ್ಪೆಕ್ಟರ್ ಜನರಲ್
3 ವರ್ಷ ಹಿರಿತನ
ಕಮೋಡೋರ್

ಡೆ|| ಇನ್‍ಸ್ಪೆಕ್ಟರ್ ಜನರಲ್
ಕ್ಯಾಪ್‍ಟನ್

ಕಮಾಂಡೆಂಟ್
ಕಮಾಂಡರ್

ಡೆಪ್ಯೂಟಿ ಕಮಾಡೆಂಟ್
ಲೆಫ್ಟಿನೆಂಟ್

ಅಸಿಸ್ಟೆಂಟ್ ಕಮಾಂಡೆಂಟ್ I
ಆಕ್ಟಿಂಗ್ ಲೆಫ್ಟಿನೆಂಟ್

ಅಸಿಸ್ಟೆಂಟ್ ಕಮಾಂಡೆಂಟ್ II
ಮಡ್‍ಫಿಪ್‍ಮನ್

ಕಮಾಂಡುಗಳು
 * ಸಾಗರದಡಿ ರಕ್ಷಣೆ ವ್ಯವಸ್ಥೆಯ ಕೇಂದ್ರ ಕಛೇರಿ ದೆಹಲಿಯಲ್ಲಿದೆ. 
 * ವಲಯ ಕಛೇರಿಗಳು ಮುಂಬೈ, ಚೆನ್ನೈ, ಪೋರ್ಟ್ ಬ್ಲೇರ್‍ಗಳಲ್ಲಿವೆ.
 * ಪಶ್ಚಿಮ ಜಿಲ್ಲಾ ಕೇಂದ್ರಗಳು ಪೋರ್ ಬಂದರು, ಮುಂಬಯಿ, ಮಂಗಳೂರು, ಕೊಚ್ಚಿ ದಾಮನ್ ಮತ್ತು ಗೋವಾಗಳಲ್ಲಿವೆ
 * ಪೂರ್ವ ಜಿಲ್ಲಾ ಕೇಂದ್ರಗಳು ಚೆನ್ನೈ, ವಿಶಾಖಪಟ್ಟಣ, ಪ್ಯಾರಾದೀಪ, ಹಲ್ಡಿಯಾ, ಟ್ಯುಟಿಕಾರನ್ ಮತ್ತು ಮಂಡಪಂಗಳಲ್ಲಿವೆ.
 * ಅಂಡಮಾನ್ ಮತ್ತು ನಿಕೋಬಾರ್ ಜಿಲ್ಲಾ ಕೇಂದ್ರಗಳು ದಿಗ್ಲಿಪುರ ಮತ್ತು ಕ್ಯಾಂಪ್‍ಬೆಲ್ ಕೊಲ್ಲಿಗಳಲ್ಲಿವೆ.

ಕೋಸ್ಟ್‍ಗಾರ್ಡ್‍ನಲ್ಲಿರುವ ಹಡಗುಗಳು
ಹಡಗುಗಳ ವರ್ಗ
ಹಡಗುಗಳ ಮಾದರಿ
ಬಲಾಬಲ

ಯುದ್ಧ ನೌಕೆ
ವಿಕ್ರಂ
ತೀರದಿಂದ ದೂರದಲ್ಲಿ ಗಸ್ತಿ
ಗಸ್ತು
ವೇಗದ ಗಸ್ತು
ಒಳನಾಡಿನಲ್ಲಿ ಗಸ್ತು
ಕಡಲ ಮುಖದಲ್ಲಿ ರಕ್ಷಣಾ ದೋಣಿ
ಒಳನಾಡಿನ ದೋಣಿ ತೆಪ್ಪ
ಏರ್‍ಕುಷನ್
ಇಂಟರ್‍ಸೆಪ್ಟರ್ ದೋಣಿ
ಇಂಟರ್ ಸೆಪ್ಟರ್ ತೆಪ್ಪ
4
9
10
13
2
5
6
12
8

 	ವಿಮಾನಗಳು
ಹೆಸರು
ಮಾದರಿ
ಸ್ಥಳ

ಸಿಜಿಎಎಸ್ 700
ಡೋರ್ನಿಯರ್ ಡೊ 228
ಹಲ್ಡಿಯಾ ಕೊಲ್ಕೋತಾ

744
228
ಮೀನಂಬಾಕಂ, ಚೆನ್ನೈ

745
228	
ಪೋರ್ಟ್‍ಬ್ಲೈರ್ ಅಂಡಮಾನ ದ್ವೀಪಗಳು

747
228
ಕೊಚ್ಚಿ

750
228
ದಮನ್

ಸಿಜಿಎಎಸ್ 800
ಎಚ್.ಎ.ಎಲ್. ಚೇತಕ್
ಗೋವಾ

841
ಎಚ್.ಎ.ಎಲ್. ಚೇತಕ್
ದಮನ್

848
ಎಚ್.ಎ.ಎಲ್. ಚೇತಕ್
ಮೀನಂಬಾಕಂ ಚೆನ್ನೈ

										(ಬಿ.ನಿರಂಜನರಾಮ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ